ಪರಿಸರ ನಾಶ ಮಾಡುವ ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಶ್ರೀಗಳು ಗಿಡ-ಮರಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಸಂದೇಶ ನೀಡಿದ್ದಾರೆ. ಅವೈಜ್ಞಾನಿಕವಾದ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಮಲೆನಾಡಿನಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ಭಾನುವಾರ ಸಹ ಬಿಡುವುಪಡೆಯದ ಜನ ಯಲ್ಲಾಪುರದ ತುಂಬೆಬೀಡಿನಲ್ಲಿ ಸಮಾವೇಶ ನಡೆಸಿದ್ದು, ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಯಲ್ಲಾಪುರದ ತುಂಬೆಬೀಡಿನಲ್ಲಿ ಜನ ಜಾಗೃತಿ ಸಮಾವೇಶ ನಡೆದಿದೆ. ಹತ್ತಾರು ಹಳ್ಳಿಯ ಜನ ಬೈಕ್ ರ‍್ಯಾಲಿ ನಡೆಸಿ ಯೋಜನೆ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾಡು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ರೀತಿಯ ಅಭಿಯಾನ ನಡೆಸಿರುವ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಅವರು ನದಿ ಜೋಡಣೆ ವಿರುದ್ಧವೂ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಮರ-ಗಿಡಗಳನ್ನು ನಾಶ ಮಾಡಿ ಅವೈಜ್ಞಾನಿಕ ಯೋಜನೆ ಜಾರಿಗೆ ತರುವುದನ್ನು ವಿರೋಧಿಸುವುದಕ್ಕಾಗಿ ಶ್ರೀಗಳು ವೃಕ್ಷಾರೋಪಣವನ್ನು ಮಾಡಿದ್ದಾರೆ.
`ಅವೈಜ್ಞಾನಿಕ ಯೋಜನೆಗಳಿಂದ ವಿರುದ್ಧ ನಿರಂತರ ಹೋರಾಟ ಅಗತ್ಯ. ಯೋಜನೆಯಿಂದ ಆಗುವ ಪರಿಸರ ಹಾನಿಯ ಬಗ್ಗೆ ವೈಜ್ಞಾನಿಕ ದಾಖಲೆಗಳ ಜೊತೆ ಆಂದೋಲನ ನಡೆಯಬೇಕು’ ಎಂದು ಸ್ವರ್ಣವಲ್ಲಿ ಶ್ರೀಗಳು ಹೇಳಿದ್ದಾರೆ. `ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರುವಿಕೆ, ಜನಾಂದೋಲನದ ಜೊತೆ ಎಲ್ಲರೂ ಸಂಘಟಿತರಾಗಿ ಈ ಹೋರಾಟ ಮುಂದುವರೆಸಬೇಕು. ಆಗ ಮಾತ್ರ ಯಶಸ್ಸು ಸಾಧ್ಯ’ ಎಂದು ನೆರೆದಿದ್ದ ಭಕ್ತರಿಗೆ ಅವರು ಕರೆ ನೀಡಿದ್ದಾರೆ.
`ಸಾವಿರಾರು ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ವಿಫಲವಾಗಿದೆ. ಬೇಡ್ತಿ-ವರದಾ ಜೋಡಣೆ ಜಾರಿಗೆ ಬಂದರೂ ಅದೇ ಸ್ಥಿತಿ ನಿರ್ಮಾಣವಾಗಲಿದೆ. ಬೇಡ್ತಿ-ವರದಾ ಜೊತೆ ಅಘನಾಶಿನಿ-ವೇದಾವತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜನ ವಿರೋಧಿಸಬೇಕು. ಜನಪ್ರತಿನಿಧಿಗಳು ತಮ್ಮ ಪಕ್ಷ ಮರೆತು ಈ ಹೋರಾಟಕ್ಕೆ ಬರಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ. ಸಮಾವೇಶದ ವೇದಿಕೆಯಲ್ಲಿ ಹಾಜರಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಜನ ಯೋಜನೆ ವಿರೋಧಿಸಿ ಮನವಿ ಸಲ್ಲಿಸಿದ್ದಾರೆ.
`ಯಾವುದೇ ಯೋಜನೆ ಜಾರಿಯಾಗುವ ಮುನ್ನ ಧಾರಣ ಸಾಮರ್ಥ್ಯ ಅಧ್ಯಯನ ನಡೆಯಬೇಕು. ಪರಿಸರಕ್ಕೆ ಮಾರಕವಾದ ಯೋಜನೆ ಜಿಲ್ಲೆಗೆ ಬೇಡವಾಗಿದ್ದು, ಅದನ್ನು ವಿರೋಧಿಸಲು ಎಲ್ಲರೂ ಒಟ್ಟಾಗಬೇಕು’ ಎಂದು ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ ಎನ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ತಜ್ಞ ಬಾಲಚಂದ್ರ ಸಾಯೀಮನೆ, ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಈ ಯೋಜನೆ ವಿರೋಧಿಸಿದರು.
ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ, ನರಸಿಂಹ ಸಾತೊಡ್ಡಿ, ಎಂ ಕೆ ಭಟ್ಟ ಯಡಳ್ಳಿ, ಪ್ರಕಾಶ ಭಟ್ಟ ತುಂಬೆಬೀಡು, ವಿಶ್ವನಾಥ ಹೆಗಡೆ ಬಾಮನಕೊಪ್ಪ ಕಾರ್ಯಕ್ರಮದ ಜವಾಬ್ದಾರಿವಹಿಸಿದ್ದರು.