ಕಾರವಾರ-ಗೋವಾ ಗಡಿಯ ಆಳ ಸಮುದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೀಪಾವಳಿ ಹಬ್ಬಂದು ಸೈನಿಕರ ಜೊತೆ ಕಾಲ ಕಳೆಯುವ ನರೇಂದ್ರ ಮೋದಿ ಅವರು ಸೋಮವಾರ INS ವಿಕ್ರಾಂತದ ಮೇಲೆ ಸಂಚಾರ ನಡೆಸಿದ್ದಾರೆ.
ADVERTISEMENT
ನರೇಂದ್ರ ಮೋದಿ ಅವರು 2014ರಿಂದ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಈ ಬಾರಿ ಅವರು ಹೆಲಿಕಾಪ್ಟರ್ ಮೂಲಕ ಅರಬ್ಬಿ ಸಮುದ್ರಕ್ಕೆ ಆಗಮಿಸಿದ್ದು, ಆಳ ಸಮುದ್ರದಲ್ಲಿದ್ದ INS ವಿಕ್ರಾಂತದ ಮೇಲೆ ಕಾಲಿಟ್ಟರು. ನೌಕಾಪಡೆ ಸಿಬ್ಬಂದಿಗೆ ಸಿಹಿ ತಿನಿಸುವ ಮೂಲಕ ಹಬ್ಬದ ಶುಭಾಶಯ ಕೋರಿದರು. ಐಎನ್‌ಎಸ್ ವಿಕ್ರಾಂತ್ ಹಾಗೂ ಬ್ರಹ್ಮೋಸ್ ಕ್ಷಿಪಣಿಯ ಕಾರ್ಯಾಚರಣೆಯನ್ನು ಅವರು ಗಮನಿಸಿದರು. `ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಭಾರತದ ಪ್ರತಿಭೆಗೆ ಸಾಕ್ಷಿ’ ಎಂದು ಬಣ್ಣಿಸಿದರು. `ವಿಕ್ರಾಂತ ಕೇವಲ ಯುದ್ಧನೌಕೆಯಲ್ಲ. ಇದು 21 ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಇದು ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವಿಕ್ರಾಂತ್ ವಿಶಾಲ, ಅಗಾಧ ಮತ್ತು ಭವ್ಯವಾದದ್ದು’ ಎಂದು ಶ್ಲಾಘಿಸಿದರು.
ADVERTISEMENT
`ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳ ಹಾಗೇ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದರು. `ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ ಆಚರಿಸುತ್ತಿರುವುದು ನನ್ನ ಅದೃಷ್ಟ’ ಎನ್ನುತ್ತ ಭಾವುಕರಾದರು. `ಭಾರತೀಯ ಸೇನೆಯ ಮೂರು ಪಡೆಗಳ ಅಸಾಧಾರಣ ಸಮನ್ವಯವೇ ಆಪರೇಷನ್ ಸಿಂಧೂರ’ ಎಂದವರು ಹೇಳಿದ್ದು, ಪಾಕಿಸ್ತಾನದ ವಿರುದ್ಧ ಭಾರತವು ಸಂಪೂರ್ಣ ಗೆಲುವಿಗೆ ಕಾರಣರಾದವರನ್ನು ಸ್ಮರಿಸಿದರು. ಕಾರವಾರ-ಗೋವಾ ಗಡಿಯ ಸಮುದ್ರದಲ್ಲಿದ್ದ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ಅವರು ಸಂಚಾರ ನಡೆಸಿದರು. `ಕೆಲವೇ ತಿಂಗಳುಗಳ ಹಿಂದೆ, ಐಎನ್‌ಎಸ್ ವಿಕ್ರಾಂತ್ ಪಾಕಿಸ್ತಾನವನ್ನು ನಿದ್ದೆಗೆಡಿಸುವಂತೆ ಮಾಡಿತು ಎಂದು ನಾವೆಲ್ಲ ನೋಡಿದ್ದೇವೆ. ನೌಕಾಪಡೆಯು ಹುಟ್ಟುಹಾಕಿದ ಭಯ, ವಾಯುಪಡೆಯು ಪ್ರದರ್ಶಿಸಿದ ಅಸಾಧಾರಣ ಕೌಶಲ್ಯ ಮತ್ತು ಸೇನೆಯ ಶೌರ್ಯದ ಜೊತೆಗೆ, ಮೂರೂ ಸೇವೆಗಳ ನಡುವಿನ ಅಸಾಧಾರಣ ಸಮನ್ವಯವು ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಕೆಲವೇ ದಿನಗಳಲ್ಲಿ ಮಂಡಿಯೂರುವ0ತೆ ಮಾಡಿತು’ ಎಂದವರು ಯುದ್ಧನೌಕೆಯ ಕೆಲಸವನ್ನು ಶ್ಲಾಘಿಸಿದರು.
ADVERTISEMENT
`ಆಪರೇಷನ್ ಸಿಂಧೂರ ಸಮಯದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್‌ನಂತಹ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಈ ಕ್ಷಿಪಣಿಗಳನ್ನು ಖರೀದಿಸಲು ಈಗ ಜಗತ್ತಿನಾದ್ಯಂತ ಹಲವು ದೇಶಗಳು ಆಸಕ್ತಿ ತೋರಿಸುತ್ತಿವೆ’ ಎಂದರು. `ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ಆಯುಧ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014ರಿಂದ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ’ ಎಂದು ವಿವರಿಸಿದರು. `ಈ ದೊಡ್ಡ ಹಡಗುಗಳು, ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ. ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾನ್ನಾಗಿಸಿರುವುದು ಯೋಧರ ಧೈರ್ಯ’ ಎಂದರು.
ಸೈನಿಕರ ಜೊತೆ ಮೋದಿ ದೀಪಾವಳಿ ಆಚರಿಸಿದ ವಿಡಿಯೋ ಇಲ್ಲಿ ನೋಡಿ..