ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದ ನೌಕರರಿಗೂ ಕೇಂದ್ರ ಸರ್ಕಾರದ ವೇತನ ಶ್ರೇಣಿ ಜಾರಿಗೆ ತರಲು ಶ್ರಮಿಸುತ್ತಿದೆ. `2026-27ರ ಅಂತ್ಯದೊಳಗೆ ಆ ಉದ್ದೇಶ ಈಡೇರಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ.
ಕಾರವಾರಕ್ಕೆ ಭೇಟಿ ನೀಡಿದ್ದ ಅವರು `ಸರ್ಕಾರಿ ನೌಕರರಿಗಾಗಿ ಮಿಲಿಟರಿ ಕ್ಯಾಂಟಿನ್ ಮಾದರಿಯ ಮಳಿಗೆ ನಿರ್ಮಿಸುತ್ತಿದ್ದು, ಅಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಶೇ 25ರಷ್ಟು ರಿಯಾಯತಿ ನೀಡಲಾಗುತ್ತದೆ. ಎಂಎಸ್‌ಐಎಲ್ ಮುಖಾಂತರ ಕ್ಯಾಂಟಿನ್ ಯೋಜನೆ ರೂಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಅದು ಜಾರಿಗೆ ಬರಲಿದೆ. ನಂತರ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಯಾಂಟಿನ್ ಯೋಜನೆ ವಿಸ್ತರಣೆ ಮಾಡುತ್ತೇವೆ’ ಎಂದು ಘೋಷಿಸಿದ್ದಾರೆ.
`ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವನ್ನು 25ಸಾವಿರದಿಂದ 50 ಸಾವಿರದವರೆಗೆ ಹೆಚ್ಚಳ, ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿಗೆ ತರುವ ಬಗ್ಗೆ ಸಂಘ ಸತತವಾಗಿ ಪ್ರಯತ್ನಿಸುತ್ತಿದೆ’ ಎಂದವರು ಹೇಳಿದ್ದಾರೆ. ಜೊತೆಗೆ `ರಾಜ್ಯದ ನೌಕರರು ನೆಮ್ಮದಿಯಂದ ಇರುವಂತೆ ಮಾಡುವುದು ಸಂಘದ ಕರ್ತವ್ಯವಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. `ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ 1 ಕೋಟಿ ರೂ ವಿಮೆ ದೊರೆಯುವ ಸ್ಯಾಲರಿ ಪ್ಯಾಕೇಜ್ ಜಾರಿಗೆ ತರಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1ರಿಂದ ಜಾರಿಗೆ ತರಲಾಗಿದ್ದು, ಮೊದಲ ಹಂತದಲ್ಲಿ ಒಳರೋಗಿಗಳಾಗಿ ಹಾಗೂ ಮುಂದಿನ ದಿನಗಳಲ್ಲಿ ಹೊರ ರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗಿದೆ. ಮಹಿಳಾ ನೌಕರರು ತಮ್ಮ ತಂದೆ ತಾಯಿಗಳನ್ನು ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ’ ಎಂದವರು ಹೇಳಿದ್ದಾರೆ.
`ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು 1 ರಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವಂತೆ ಕೋರಿದ ಸಂಘದ ಮನವಿಗೆ ಸ್ಪಂದಿಸಿದ ಸರ್ಕಾರವು ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಸರ್ಕಾರ ಹೊರಡಿಸಲಿದ್ದು, ಇದರಿಂದ ರಾಜ್ಯದಲ್ಲಿ 2 ಲಕ್ಷ 25 ಸಾವಿರ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ’ ಎಂದವರು ವಿವರಿಸಿದ್ದಾರೆ.