ಸರ್ಕಾರದ ಅವೈಜ್ಞಾನಿಕ ಯೋಜನೆಗಳಲ್ಲಿ ಒಂದಾದ ಬೇಡ್ತಿ-ವರದಿ ಜೋಡಣೆ ವಿಷಯದ ಹೋರಾಟದ ಕಾವು ಜೋರಾಗಿದೆ. ಭಾನುವಾರದ ಸಮಾವೇಶ ಯಶಸ್ವಿಯಾದ ಬೆನ್ನಲ್ಲೆ ಸೋಮವಾರ ಮತ್ತೆರಡು ಬೆಳವಣಿಗೆ ನಡೆದಿದೆ.
`ನದಿ ಹರಿವು ಅರಿವು’ ಎಂಬ ವಿಷಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಮಾನ ಮನಸ್ಕರು ಅಕ್ಟೊಬರ್ 25ರಿಂದ ಮೂರು ದಿನದ ಪಾದಯಾತ್ರೆ ಆಯೋಜಿಸಿದ್ದು, ಈ ದಿನ ಸ್ವರ್ಣವಲ್ಲಿ ಶ್ರೀಗಳ ಬಳಿ ಈ ವಿಷಯವಾಗಿ ಚರ್ಚಿಸಿದ್ದಾರೆ. ಅದರೊಂದಿಗೆ ಯಲ್ಲಾಪುರದ ಬೇಡ್ತಿ ನದಿ ಅಂಚಿನಲ್ಲಿರುವ ಹುಲಿಯಪ್ಪನ ಕಟ್ಟೆಯಲ್ಲಿ `ಈ ಹೋರಾಟ ಯಶಸ್ವಿಯಾಗಲಿ’ ಎಂದು ಪ್ರಾರ್ಥಿಸಿ ಸಾವಿರಕ್ಕೂ ಅಧಿಕ ಜನ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶ್ರೀಗಳ ಆಶೀರ್ವಾದ ಹಾಗೂ ದೇವರ ಅನುಗ್ರಹದಲ್ಲಿ ಈ ಹೋರಾಟ ಮುಂದುವರೆದಿದೆ. ಈ ದಿನ ಬೇಡ್ತಿ ಸೇತುವೆಯ ಬಳಿ ಇರುವ ಹೊಳೆ ಹುಲಿಯಪ್ಪ ದೇವರಿಗೆ ಸುತ್ತಮುತ್ತಲಿನ ಸಾವಿರಾರು ಜನರು ಭಕ್ತರು ಆಗಮಿಸಿ ಹಣ್ಣುಕಾಯಿ ಸೇವೆ ಸಲ್ಲಿಸಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿ ಹೊಳೆ ಹುಲಿಯಪ್ಪ ದೇವರಿಗೆ ನೈವೇದ್ಯಕ್ಕೆಂದು ಸಾಲು ಸಾಲು ತೆಂಗಿನ ಕಾಯಿಗಳನ್ನು ಒಡೆದು ದನ-ಕರು ರಕ್ಷಣೆಗಾಗಿ ಪ್ರಾರ್ಥಿಸಿದ್ದಾರೆ. `ಪ್ರಸ್ತಾಪಿತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಆಗದ ರೀತಿಯಲ್ಲಿ ಅನುಗ್ರಹ ಮಾಡು’ ಎಂದು ಆ ಭಗವಂತನಲ್ಲಿ ಅರ್ಚಕ ಶಿವರಾಮ ಭಾಗ್ವತ ಮಣ್ಕುಳಿ ಅವರು ಕೇಳಿಕೊಂಡಿದ್ದಾರೆ.
ಜೊತೆಗೆ `ಪರಿಸರ ನಾಶವಾಗುವ ಯೋಜನೆಯ ಅನುಷ್ಠಾನ ಬೇಡ. ಅಧಿಕಾರದಲ್ಲಿರುವವರಿಗೆ ಇಂತಹ ಯೋಜನೆ ರದ್ಧು ಮಾಡುವ ಬುದ್ದಿ ಬರಲಿ’ ಎಂದು ನೆರೆದವರು ಬೇಡಿಕೊಂಡರು. ಅದೇ ವೇಳೆ ಹುಲಿಯಪ್ಪ ದೇವರಿಂದ ಪ್ರಸಾದ ಅನುಗ್ರಹವಾಗಿದ್ದು, ಭಕ್ತರು ಹರ್ಷವ್ಯಕ್ತಪಡಿಸಿದರು. ಯೋಜನೆ ಅನುಷ್ಠಾನಗೊಂಡರೆ ಆಗುವ ದುಷ್ಪರಿಣಾಮಗಳು, ಜನರಿಗೆ, ಪ್ರಕೃತಿಗೆ ಆಗುವ ತೊಂದರೆಗಳನ್ನು ಅಲ್ಲಿದ್ದ ಪರಿಸರ ತಜ್ಞರು ಜನರಿಗೆ ವಿವರಿಸಿದರು.