ಹೊನ್ನಾವರದ ಶಂಬು ಗೌಡ ಅವರು ನಡುರಾತ್ರಿ ಶಾರದಾ ಅವರ ಮನೆಗೆ ನುಗ್ಗಿದ್ದಾರೆ. ಶಾರದಾ ಗೌಡ ಅವರು ದೊಡ್ಡದಾಗಿ ಬೊಬ್ಬೆ ಹಾಕಿದಾಗ ಕತ್ತಲ ದಾರಿಯಲ್ಲಿ ಶಂಬು ಗೌಡ ಅವರು ಓಡಿ ಪರಾರಿಯಾಗಿದ್ದಾರೆ.
ಹೊನ್ನಾವರದ ಮುಗಳಿ ಗುಣವಂತೆಯಲ್ಲಿ ಶಾರದಾ ಗೌಡ ಅವರು ವಾಸವಾಗಿದ್ದಾರೆ. ಅದೇ ಊರಿನ ಶಂಬು ಗೌಡ ಅವರು ಶಾರದಾ ಗೌಡ ಅವರಿಗೆ ಕಾಟ ಕೊಡುತ್ತಿದ್ದು, ಅಕ್ಟೊಬರ್ 14ರ ನಸುಕಿನ 3 ಗಂಟೆಗೆ ಶಂಬು ಗೌಡರು ಶಾರದಾ ಗೌಡ ಅವರ ಮನೆಗೆ ನುಗ್ಗಿದರು. ಶಾರದಾ ಗೌಡ ಅವರು ಮಲಗಿರುವ ಕೋಣೆ ಪ್ರವೇಶಿಸಿ `ಶಾರದಾ.. ಶಾರದಾ’ ಎಂದು ಪಿಸುಮಾತಿನಲ್ಲಿ ಕರೆದರು.
ನಿದ್ದೆ ಮಾಡುತ್ತಿದ್ದ ಶಾರದಾ ಗೌಡ ಅವರು ಒಮ್ಮೆಲೆ ಎಚ್ಚರಗೊಂಡಿದ್ದು, ಶಂಬು ಗೌಡರ ಅವತಾರ ನೋಡಿ ಬೆಚ್ಚು ಬಿದ್ದರು. `ಮನೆ ಒಳಗೆ ಏಕೆ ಬಂದೆ?’ ಎಂದು ಶಾರದಾ ಗೌಡ ಪ್ರಶ್ನಿಸಿದರು. `ದೊಡ್ಡದಾಗಿ ಕೂಗಬೇಡ’ ಎಂದು ಶಂಬು ಗೌಡ ಮನವಿ ಮಾಡಿದರು. ಆದರೂ ಶಾರದಾ ಗೌಡ ಅವರು ದೊಡ್ಡದಾಗಿ ಕೂಗಲು ಶುರು ಮಾಡಿದರು. `ಜೋರಾಗಿ ಕೂಗಿದರೆ ಕುತ್ತಿಗೆ ಅದುಮುವೆ’ ಎಂದು ಶಂಬು ಗೌಡ ಅವರು ಬೆದರಿಸಿದರು.
ಅದಾಗಿಯೂ ಶಾರದಾ ಗೌಡ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಇದರಿಂದ ಬೆದರಿದ ಶಂಬು ಗೌಡ ಅವರು ಕತ್ತಲ ದಾರಿಯಲ್ಲಿ ಓಡಿ ಪರಾರಿಯಾದರು. ಅಕ್ಟೊಬರ್ 15ರಂದು ಬೆಳಗ್ಗೆ ಮತ್ತೆ ಶಾರದಾ ಗೌಡ ಅವರ ಮನೆ ಬಳಿ ಬಂದ ಶಂಬು ಗೌಡ ಅವರು `ನೀವು ಓಡಾಡುವ ದಾರಿ ಬಂದ್ ಮಾಡುವೆ’ ಎಂದು ಹೆದರಿಸಿದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಶಾರದಾ ಗೌಡ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.