ಕಳೆದ ವರ್ಷ ಹಿರಿಯ ಅಧಿಕಾರಿಗಳ ಕಿರುಕುಳ ಹಿನ್ನಲೆ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದ ಶಿರಸಿ ಅಬಕಾರಿ ಇಲಾಖೆಯ ವಾಹನ ಚಾಲಕ ದುರ್ಗಪ್ಪ ಗಾಯಕವಾಡ ಅವರು ಅನುಮಾನಾಸ್ಪದ ರೀತಿ ಸಾವನಪ್ಪಿದ್ದಾರೆ. ಅವರ ಸಾವಿನ ತನಿಖೆಗಾಗಿ ಕುಟುಂಬದವರು ದೂರು ನೀಡಿದ್ದಾರೆ.
ಶಿರಸಿಯ ಅಬಕಾರಿ ಇಲಾಖೆಯಲ್ಲಿ ದುರ್ಗಪ್ಪ ಗಾಯಕವಾಡ ಅವರು ವಾಹನ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಮರಾಠಿಕೊಪ್ಪದಲ್ಲಿ ವಾಸವಾಗಿರುವ ಅವರು ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ಕಾರಣ ಮೇಲಧಿಕಾರಿಗಳು ಅವರಿಗೆ ಬುದ್ದಿ ಹೇಳಿದ್ದರು. ಆ ಅವಧಿಯಲ್ಲಿ ಅಬಕಾರಿ ಉಪಅಧೀಕ್ಷಕ ಶಿವಪ್ಪ ಎಚ್ ಎಸ್ ಅವರು ದುರ್ಗಪ್ಪ ಗಾಯಕವಾಡರ ವರ್ತನೆಯ ಬಗ್ಗೆ ಮೇಲಧಿಕಾರಿಗಳಿಗೆ ಸಹ ದೂರು ನೀಡಿದ್ದರು. ದುರ್ಗಪ್ಪ ಗಾಯಕವಾಡ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ವರದಿಯನ್ನು ಸಹ ಮೇಲಧಿಕಾರಿಗಳಿಗೆ ರವಾನಿಸಿದ್ದರು. ಈ ಹಿನ್ನಲೆ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪ್ರಾಧಿಕಾರದಿಂದ ಅಬಕಾರಿ ಉಪನಿರೀಕ್ಷಕರಿಗೆ ಸೂಚನೆ ಬಂದಿತ್ತು.
2024ರ ಸೆ 19ರಂದು ಚಾಲಕ ದುರ್ಗಪ್ಪ ಎಂ ಗಾಯಕವಾಡ ಅವರಿಗೆ ಅಬಕಾರಿ ಉಪನಿರೀಕ್ಷಕ ಶಿವಪ್ಪ ಎಚ್ ಎಸ್ ಅವರು ನೋಟಿಸ್ ನೀಡಿದ್ದರು. ನೋಟಿಸ್ ನೋಡಿ ಸಿಟ್ಟಾದ ಚಾಲಕ `ನಾನು ಸಾವಿಗೆ ಶರಣಾಗುವೆ’ ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ರವಾನಿಸಿದ್ದರು. `ಹಿರಿಯ ಅಧಿಕಾರಿಗಳ ಕಿರುಕುಳದಿಂದ ನಾನು ಸಾವನಪ್ಪುತ್ತೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ’ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದರು. ಇದನ್ನು ಅರಿತ ಶಿವಪ್ಪ ಅವರು ಅದೇ ದಿನ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
2025ರ ಅಕ್ಟೊಬರ್ 23ರಂದು ಮರಾಠಿಕೊಪ್ಪದ ಬಾಡಿಗೆ ಮನೆಯಲ್ಲಿ ದುರ್ಗಪ್ಪ ಗಾಯಕವಾಡ ಅವರು ಸಾವನಪ್ಪಿದ್ದಾರೆ. `ದುರ್ಗಪ್ಪ ಗಾಯಕವಾಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದರು’ ಎಂದು ಅವರ ಧಾರವಾಡದಲ್ಲಿರುವ ಅವರ ಮಗ ಕಾರ್ತಿಕ ಗಾಯಕವಾಡ ಅವರು ಒಪ್ಪಿದ್ದಾರೆ. ಅದರೊಂದಿಗೆ ಅವರ ಸಾವಿನಲ್ಲಿ ಸಂಶಯವನ್ನು ವ್ಯಕ್ತಪಡಿಸಿದ್ದು, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.