ಶಿರಸಿ ಹುಲೆಕಲ್ ಬಳಿಯ ಚೌಡೇಶ್ವರಿ ದೇವಿ ದೇವಾಲಯಕ್ಕೆ ನುಗ್ಗಿ ದೇವರ ಒಡವೆ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣ ಕದ್ದವರು ಸಿಕ್ಕಿಬಿದ್ದಿದ್ದಾರೆ. ಪರಶುರಾಮ ಶೆಟ್ಟಿ ಅವರ ದೂರಿನ ಮೇರೆಗೆ ಪಿಐ ಶಶಿಕಾಂತ ವರ್ಮ ಅವರ ತಂಡಕ್ಕೆ ತನಿಖೆ ನಡೆಸಿದ್ದು, ಕಳ್ಳತನವನ್ನೇ ಕಾಯಕವನ್ನಾಗಿಸಿಕೊಂಡಿದ್ದ ಆರೋಪಿಗಳಿಬ್ಬರು ಜೈಲು ಸೇರಿದ್ದಾರೆ.
ಶಿವಮೊಗ್ಗದ ಭದ್ರಾವತಿ ಅಂತರಗoಗೆಯ ಬಾಲಕುಮಾರ ವಾಸು ಕೆ ಹಾಗೂ ಮಹಮ್ಮದ್ ಅಲಿಕಾಕಾ ಬಾಲ್ಯ ಸ್ನೇಹಿತರಾಗಿದ್ದರು. ದೊಡ್ಡವರಾದ ಮೇಲೆ ಬಾಲಕುಮಾರ ಅವರು ಬೆಂಗಳೂರು ಸೇರಿದ್ದರು. ಮಹಮದ್ ಅಲಿ ಅವರು ಶಿವಮೊಗ್ಗದಲ್ಲಿಯೇ ವಾಸವಾಗಿದ್ದರು. ಕೆಲ ವರ್ಷದ ನಂತರ ಅವರಿಬ್ಬರು ಒಟ್ಟಿಗೆ ಸೇರಿ ಕಳ್ಳತನದ ವೃತ್ತಿ ಶುರು ಮಾಡಿದರು. ರಾಜ್ಯದ ನಾನಾ ಭಾಗಗಳಿಗೆ ಸಂಚರಿಸಿ ಕಳ್ಳತನ ಮಾಡುವುದನ್ನು ಕಾಯಕವನ್ನಾಗಿಸಿಕೊಂಡರು. ಅದರoತೆ 2025ರ ಸೆಪ್ಟೆಂಬರ್ 10ರ ರಾತ್ರಿ ಅವರಿಬ್ಬರು ಶಿರಸಿಗೆ ಬಂದಿದ್ದರು. ಆ ದಿನ ರಾತ್ರಿ 1.15ರ ಆಸುಪಾಸಿನಲ್ಲಿ ಹುಲೇಕಲ್’ಗೆ ಹೋದ ಅವರು ಹಂಚರ್ತ ಬಳಿಯ ಚೌಡೇಶ್ವರಿ ದೇವಾಲಯದ ಬಾಗಿಲು ಬಡಿದಿದ್ದರು. ದೇವಾಲಯದ ಬಳಿ ಯಾರೂ ಇಲ್ಲದಿರುವುದನ್ನು ಗಮನಿಸಿ ಸ್ಟೀಲ್ ಬಾಗಿಲನ್ನು ಒಡೆದಿದ್ದರು. ದೇವರ ಮೂರ್ತಿ ಮೇಲಿದ್ದ ಬಂಗಾರ ಹಾಗೂ ಬೆಳ್ಳಿ ಆಭರಣಕ್ಕೆ ಅವರಿಬ್ಬರು ಕೈ ಹಾಕಿದ್ದರು. 2.31 ಲಕ್ಷ ರೂ ಮೌಲ್ಯದ ಆಭರಣದ ಜೊತೆ ಕಾಣಿಕೆ ಹುಂಡಿಯಲ್ಲಿದ್ದ 80 ಸಾವಿರ ರೂ ಹಣವನ್ನು ದೋಚಿದ್ದರು. ಕಳ್ಳತನದ ನಂತರ ಸಾಕ್ಷಿನಾಶಕ್ಕೂ ಪ್ರಯತ್ನಿಸಿದ್ದರು.
ಶಿರಸಿ ಭೂತಪ್ಪನಕಟ್ಟೆ ಬಳಿಯ ವ್ಯಾಪಾರಿ ಪರಶುರಾಮ ಶೆಟ್ಟಿ ಅವರ ಕುಟುಂಬದವರು ಅನಾದಿಕಾಲದಿಂದಲೂ ಚೌಡೇಶ್ವರಿ ದೇವಿಯ ಆರಾಧಕರಾಗಿದ್ದು, ತಮ್ಮ ಕುಟುಂಬದ ದೇವಾಲಯದಲ್ಲಿ ಕಳ್ಳತನ ನಡೆದಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು. ದೇವರ ದುಡ್ಡು-ಒಡವೆ ಕಳ್ಳತನವಾದ ಬಗ್ಗೆ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ್ ಎಂ ಅವರು ಪ್ರಕರಣದ ಬಗ್ಗೆ ಡಿವೈಎಸ್ಪಿ ಗೀತಾ ಪಾಟೀಲ ಅವರ ಬಳಿ ವರದಿ ಕೇಳಿದರು. ಕಳ್ಳರ ಪತ್ತೆಗೆ ಕಾರ್ಯತಂತ್ರ ರೂಪಿಸಿ ಬೆಂಗಳೂರು, ಶಿವಮೊಗ್ಗ, ಭದ್ರಾವತಿ ಸೇರಿ ರಾಜ್ಯದ ನಾನಾ ಕಡೆ ಹುಡುಕಾಟ ನಡೆಸಿದರು. ಶಿರಸಿ ಪಿಐ ಶಶಿಕಾಂತ ವರ್ಮ ಅವರ ತನಿಖಾ ತಂಡಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಮ್, ಅಶೋಕ ಆರ್ ರಾಠೋಡ ಅವರು ಸೇರಿದರು. ಪೊಲೀಸ್ ಸಿಬ್ಬಂದಿ ಪ್ರಕಾಶ ತಳವಾರ, ಮಹಾದೇವ ನಾಯ್ಕ, ವಿಘ್ನೇಶ್ವರ ಹೆಗಡೆ, ಮಹಾಂತೇಶ್, ಅರುಣಕುಮಾರ್, ದಾವುಲ್ಸಾಬ, ಲಕ್ಷ್ಮಣ, ಚೇತನ, ರವಿಕುಮಾರ್, ಗದಿಗೆಪ್ಪ ಅವರು ವಿವಿಧ ಆಯಾಮಗಳಲ್ಲಿ ಕಳ್ಳರ ಹುಡುಕಾಟ ನಡೆಸಿದರು. ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಹಾಗೂ ಬಬನ್ ಕದಂ ಅವರು ಡಕಾಯಿತರ ಸಂಚಲನದ ಬಗ್ಗೆ ತಮ್ಮ ಚಾಣಾಕ್ಷತನದಿಂದ ಮಾಹಿತಿ ಸಂಗ್ರಹಿಸಿದರು.
ಈ ಎಲ್ಲಾ ಪೊಲೀಸ್ ಅಧಿಕಾರಿ-ಸಿಬ್ಬಂದಿ ಪ್ರಯತ್ನದಿಂದ ದೇವರ ದುಡ್ಡು ಕದ್ದಿದ್ದ ಬಾಲಕುಮಾರ ವಾಸು ಕೆ ಹಾಗೂ ಮಹಮ್ಮದ್ ಅಲಿಕಾಕಾ ಸಿಕ್ಕಿಬಿದ್ದರು. ಪೊಲೀಸರು ಅವರ ಬಳಿಯಿದ್ದ 1.50 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣದ ಜೊತೆ 60 ಸಾವಿರ ರೂ ಹಣವನ್ನು ಜಪ್ತು ಮಾಡಿದರು. ಕಳ್ಳರಿಬ್ಬರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.