ಶಿರಸಿಯಲ್ಲಿ ಕಾಡು ಪ್ರಾಣಿ ಹತ್ಯೆ ಮಾಡಿದ ದುರುಳರಿಗೆ ಅದರ ಮಾಂಸ ಸೇವಿಸುವ ಭಾಗ್ಯ ಸಿಕ್ಕಿಲ್ಲ. ಕಾಡು ಮಾಂಸ ಬೇಯಿಸುವಾಗಲೇ ಅರಣ್ಯಾಧಿಕಾರಿಗಳು ದಾಳಿ ಮಾಡಿ ಮಾಂಸಪ್ರಿಯರ ಊಟಕ್ಕೆ ಕತ್ತರಿ ಹಾಕಿದ್ದಾರೆ!
ಶಿರಸಿ-ಹುಬ್ಬಳ್ಳಿ ರಸ್ತೆಯ ಮುಡೇಬೈಲ್ನ ಗಂಗಾಧರ ಗೌಡ, ಶಂಕರ ಗೌಡ ಹಾಗೂ ಶಂಕರ ನಾಯ್ಕ ಸೇರಿ ಶಿಕಾರಿಗೆ ಹೋಗಿದ್ದರು. ರವಿ ಗೌಡ ಹಾಗೂ ಗಣಪತಿ ಗೌಡ ಸಹ ಅವರ ಬೆನ್ನಿಗೆ ಬಿದ್ದಿದ್ದರು. ಈ ಎಲ್ಲರೂ ಸೇರಿ ಕಾಡು ಹಂದಿಯನ್ನು ಭೇಟೆ ಆಡಿದ್ದರು. ಹಂದಿ ಮಾಂಸವನ್ನು ಸರಿಯಾಗಿ ಬೇಯಿಸಿ ಅದನ್ನು ಸಮಪಾಲು ಮಾಡುವ ಬಗ್ಗೆ ಎಲ್ಲರೂ ಮಾತನಾಡಿಕೊಂಡಿದ್ದರು.
ಅದರ ಪ್ರಕಾರ ಕಾಡು ಹಂದಿ ಮಾಂಸವನ್ನು ಅವರು ಬೇಯಿಸುತ್ತಿದ್ದರು. ಗುಂಡಿನ ಸದ್ದು ಕೇಳಿದ ಆ ಊರಿನ ಜನ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದರು. ಅರಣ್ಯಾಧಿಕಾರಿಗಳು ವಿಚಾರಿಸಿದಾಗ ಐವರು ಕಾಡಿನ ಕಡೆ ಹೋಗಿದ್ದ ವಿಷಯ ಗೊತ್ತಾಯಿತು. ಅದೇ ಸುಳಿವಿನ ಆಧಾರದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಮಾಂಸ ಬೇಯಿಸುತ್ತಿದ್ದವರು ಸಿಕ್ಕಿ ಬಿದ್ದರು.
ಐವರಲ್ಲಿ ಮೂವರನ್ನು ಬನವಾಸಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದರು. ಇಬ್ಬರು ಪರಾರಿಯಾದರು. ಗಂಗಾಧರ ಗೌಡ, ಶಂಕರ ಗೌಡ ಹಾಗೂ ಶಂಕರ ನಾಯ್ಕ ಸಿಕ್ಕಿಬಿದ್ದವರಾಗಿದ್ದಾರೆ. ರವಿ ಗೌಡ ಹಾಗೂ ಗಣಪತಿ ಗೌಡ ಕಾಡಿನ ಕಡೆ ಓಡಿದ್ದು, ಅವರ ಹುಡುಕಾಟ ಮುಂದುವರೆದಿದೆ.