ಪ್ರವಾಸಿಗರು ತುಂಬಿದ್ದ ಬಸ್ಸು ಸಿದ್ದಾಪುರದಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 21 ಪ್ರಯಾಣಿಕರು ಪೆಟ್ಟು ಮಾಡಿಕೊಂಡಿದ್ದಾರೆ.
ಅಕ್ಟೊಬರ್ 19ರಂದು ತುಮಕೂರಿನ ಮನುಪ್ರಸಾದ ಅವರು ಖಾಸಗಿ ಬಸ್ಸು ಓಡಿಸುತ್ತಿದ್ದರು. ಈ ಬಸ್ಸಿನಲ್ಲಿ ಚಿಕ್ಕಬಳ್ಳಾಪುರದ ಜನರಿದ್ದು, ಅವರೆಲ್ಲರೂ ಸಿಗಂದೂರು ಪ್ರವಾಸ ಮಾಡಿದ್ದರು. ದೇವಿ ದರ್ಶನದ ನಂತರ ಅವರೆಲ್ಲರೂ ಜೋಗ ಜಲಪಾತ ವೀಕ್ಷಣೆ ಮಾಡುವವರಿದ್ದರು. ಅದಾದ ನಂತರ ವಡನಬೈಲಿನ ಬಳೆಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳಲು ಉದ್ದೇಶಿಸಿದ್ದರು.
ಆದರೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾಳಗುಪ್ಪ-ಹೊನ್ನಾವರ ರಸ್ತೆಯಲ್ಲಿ ತೆರಳುವಾಗ ಬಸ್ಸಿನ ಬ್ರೆಕ್ ಕೈ ಕೊಟ್ಟಿತು. ತಿರುವುಗಳಿಂದ ಕೂಡಿದ ದಾರಿಯಲ್ಲಿ ಬಸ್ಸು ತಿರುಗಿ ಬಿದ್ದಿತು. ಸಿದ್ದಾಪುರ ತಾಲೂಕಿನ ಜೋಗಿನಮಠ ಬಳಿ ತಿರುವಿನಲ್ಲಿ ಎಡಮಗ್ಗುಲಾಗಿ ಬಸ್ಸು ಪಲ್ಟಿ ಹೊಡೆಯಿತು.
ಬಸ್ಸು ಓಡಿಸುತ್ತಿದ್ದ ಮನುಪ್ರಸಾದ ಅವರು ಪೆಟ್ಟು ಮಾಡಿಕೊಂಡರು. ಇದರೊಂದಿಗೆ ಬಸ್ಸಿನ ಒಳಗಿದ್ದ 20 ಪ್ರಯಾಣಿಕರು ಗಾಯಗೊಂಡರು. ಬಸ್ಸು ಚಾಲಕನ ಅತಿವೇಗ ಅಪಘಾತಕ್ಕೆ ಕಾರಣ ಎಂದು ಚಿಕ್ಕಬಳ್ಳಾಪುರದ ಪ್ರಯಾಣಿಕರ ಅಶ್ವತಪ್ಪ ಮನೆಗಾರ ಅವರು ದೂರಿದರು. ಈ ಬಗ್ಗೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದರು.