ಪ್ರಯಾಣಿಕರನ್ನು ಕರೆದೊಯ್ಯುವ ಭಟ್ಕಳದ APM ಬಸ್ಸಿನ ಚಾಲಕ ಚಂದ್ರಶೇಖರ ಪೂಜಾರಿ ಅವರಿಗೆ ಹೃದಯಘಾತವಾಗಿದ್ದು, ತಕ್ಷಣ ಬಸ್ಸನ್ನು ಬದಿಗೆ ನಿಲ್ಲಿಸಿ ಅವರು ಪ್ರಾಣಬಿಟ್ಟಿದ್ದಾರೆ.
ಭಟ್ಕಳದ ಮಣ್ಕುಳಿಯಲ್ಲಿ ವಾಸವಾಗಿರುವ ಚಂದ್ರಶೇಖರ ಸುಬ್ಬಣ್ಣ ಪೂಜಾರಿ ಅವರು ಕಳೆದ ವರ್ಷ ಹೃದಯ ಚಿಕಿತ್ಸೆಗೆ ಒಳಗಾಗಿದ್ದರು. ವಯಸ್ಸು 64 ಆದರೂ ಅವರು ತಮ್ಮ ಚಾಲಕ ಕೆಲಸದಿಂದ ನಿವೃತ್ತಿಪಡೆದಿರಲಿಲ್ಲ. ಹೃದಯ ಚಿಕಿತ್ಸೆ ನಂತರವೂ ಅವರು ಬಸ್ಸು ಚಾಲನೆ ಮಾಡುತ್ತಿದ್ದರು. ಸೋಮವಾರ ಸಹ ಮನೆಯಿಂದ ಹೊರಟ ಅವರು ಎಪಿಎಂ ಎಜನ್ಸಿಯ ಬಸ್ಸನ್ನು ಭಟ್ಕಳದ ಬಸ್ ನಿಲ್ದಾಣದವರೆಗೆ ಓಡಿಸಿಕೊಂಡು ಬಂದರು.
ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿದ್ದರಿಂದ ಅವರು ಸರ್ಕಾರಿ ಬಸ್ ನಿಲ್ದಾಣದ ಎದುರಿನ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿದರು. ಬಸ್ಸಿನ ಒಳಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗದೇ ತೀವ್ರವಾದ ಹೃದಯಘಾತಕ್ಕೆ ಒಳಗಾದರು. ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದರು. ಬಸ್ಸಿನೊಳಗೆ ಪ್ರಯಾಣಕರು ತುಂಬಿದ ನಂತರ ಬಸ್ಸು ಚಲನೆಯಲ್ಲಿರುವಾಗ ಚಾಲಕನಿಗೆ ಹೃದಯಘಾತ ಆಗಿದ್ದರೆ ದೊಡ್ಡ ಅನಾಹುತ ನಡೆಯುತ್ತಿದ್ದು, ಚಂದ್ರಶೇಖರ ಪೂಜಾರಿ ಅವರ ಆರೋಗ್ಯದಲ್ಲಿನ ಏರುಪೇರಿನ ಮುನ್ಸೂಚನೆ ಅವಘಡವನ್ನು ತಪ್ಪಿಸಿತು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯತೀಶ ಪೂಜಾರಿ ಅವರು ತಂದೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಭಟ್ಕಳ ಶಹರ ಪೊಲೀಸರು ಪ್ರಕರಣ ದಾಖಲಿಸಿದರು.