ಪತ್ನಿಗೆ ಥಳಿಸಿ ಆಕೆಯ ಒಡವೆ ಕದ್ದು ಪರದೇಶಕ್ಕೆ ಪರಾರಿಯಾಗಿದ್ದ ಮುಂಡಗೋಡಿನ ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಎರಡು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.
ಮುಂಡಗೋಡದ ಕೆಎಚ್‌ಬಿ ಕಾಲೋನಿಯ ಇರಮಸಭಾ ಅವರು ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಮದುವೆ ಆಗಿದ್ದರು. ಮದುವೆ ಆದ ಶುರುವಿನಲ್ಲಿ ಅವರಿಬ್ಬರು ಚನ್ನಾಗಿಯೇ ಇದ್ದರು. ನಂತರ ಅರ್ಫಾಜ ಪತ್ನಿಯನ್ನು ಪೀಡಿಸಲು ಶುರು ಮಾಡಿದರು. ವರದಕ್ಷಿಣೆ ತಂದುಕೊಡುವoತೆ ಅವರು ಕಾಡಿಸುತ್ತಿದ್ದರು.
ಅರ್ಫಾಜ ಅವರು ವರದಕ್ಷಿಣೆ ಕೊಡದ ಕಾರಣದಿಂದ ನಿತ್ಯ ಜಗಳ ಮಾಡುತ್ತಿದ್ದರು. ಇದೇ ವಿಷಯವಾಗಿ ಅರ್ಫಾಜ ಅವರು ಇರಮಸಭಾ ಅವರ ಮೇಲೆ ಕೈ ಮಾಡಿದ್ದರು. ಇರಮಸಭಾ ಅವರಿಗೆ ತವರುಮನೆಯವರು ಉಡುಗರೆಯಾಗಿ ಕೊಟ್ಟಿದ್ದ 12 ತೊಲೆ ಬಂಗಾರದ ಆಭರಣವನ್ನು ಕಿತ್ತುಕೊಂಡಿದ್ದ ಅರ್ಫಾಜ ಅವರು ಇರಮಸಭಾ ಅವರನ್ನು ಮನೆಯಿಂದ ಹೊರಹಾಕಿದ್ದರು. ಇನ್ನಷ್ಟು ವರದಕ್ಷಿಣೆ ಕೊಡದೇ ಇದ್ದರೆ ಸೀಮೆಎಣ್ಣೆ ಸುರಿದು ಸುಡುವುದಾಗಿ ಬೆದರಿಸಿದ್ದರು.
2022ರ ಡಿಸೆಂಬರ್ 17ರಂದು ಇರಮಸಭಾ ಅವರು ಗಂಡನಮನೆಗೆ ಹೋದಾಗ ಅಲ್ಲಿದ್ದ ಐವರು ಅವರನ್ನು ರಸ್ತೆಗೆ ದೂಡಿದ್ದರು. ಜೀವ ಬೆದರಿಕೆಯಿರುವ ಬಗ್ಗೆ ಇರಮಸಭಾ ಅವರು ಪೊಲೀಸ್ ದೂರು ನೀಡಿದ್ದರು. ಮುಖ್ಯ ಆರೋಪಿಯಾದ ಅರ್ಫಾಜ್ ಅಹಮ್ಮದ ಹುಸೇನ್ ಮಿರ್ಜಾನಕರ್ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಆತನ ಬಗ್ಗೆ ಕಿಂಚಿತ್ತು ಸುಳಿವು ಇರಲಿಲ್ಲ. ಅರ್ಫಾಜ ಅವರು ಹೊರದೇಶದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.
ಈ ನಡುವೆ ಭಾನುವಾರ ಅರ್ಫಾಜ ಮುಂಬೈಗೆ ಬಂದ ಮಾಹಿತಿ ಅರಿತು ಪೊಲೀಸರು ಅಲ್ಲಿಗೆ ಹೋದರು. ಅರ್ಫಾಜರನ್ನು ಅಲ್ಲಿಯೇ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.