ಕುಮಟಾದ ನಾಡುಮಾಸ್ಕೇರಿ ಬಳಿ ಸರ್ಕಾರಿ ಜಾಗ ಅನಧಿಕೃತ ಮಾರಾಟದ ಆರೋಪ ಕೇಳಿ ಬಂದಿದೆ. ಅಲ್ಲಿನ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅವರೇ ಈ ಬಗ್ಗೆ ದೂರಿದ್ದು, ಜಿಲ್ಲಾಡಳಿತದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸರ್ಕಾರಿ ಜಾಗ ಅಕ್ರಮ ಮಾರಾಟದ ಬಗ್ಗೆ 5 ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ, ಈವರೆಗೂ ಜಿಲ್ಲಾಡಳಿತ ಕ್ರಮ ಜರುಗಿಸಿಲ್ಲ’ ಎಂದು ಆಕ್ಷೇಪಿಸಿದರು. `ಹೊರ ರಾಜ್ಯದ ಕೆಲವರು ಅಕ್ರಮವಾಗಿ ಇಲ್ಲಿ ಜಾಗಪಡೆದಿದ್ದಾರೆ. ಬೆಲೆ ಬಾಳುವ ಭೂಮಿ ರಕ್ಷಣೆಗೆ ಸರ್ಕಾರ ಆಸಕ್ತಿವಹಿಸಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು.
`ಸರ್ಕಾರಿ ಭೂಮಿ ಅನ್ಯರ ಪಾಲಾಗುವುದನ್ನು ತಪ್ಪಿಸುವಂತೆ ಸಾಕಷ್ಟು ಬಾರಿ ಒತ್ತಡ ಹೇರಲಾಗಿದೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಕಾಟಾಚಾರಕ್ಕೆ ಸರ್ವೇ ಮಾಡಿ ಅಧಿಕಾರಿಗಳು ಪ್ರಕರಣ ಕೈ ಬಿಟ್ಟಿದ್ದಾರೆ’ ಎಂದು ದೂರಿದರು.
`ಈ ಭಾಗದಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆದಿದೆ. ನ್ಯಾಯಾಲಯದ ಆದೇಶವಿದ್ದರೂ ಅನಧಿಕೃತ ಕಟ್ಟಡ ತೆರವಾಗಿಲ್ಲ. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಂದಿಲ್ಲ ಎಂದವರು ವಿವರಿಸಿದರು. `ಗೋಮಾಳದ ಜಾಗವನ್ನು ಕೆಲವರು ಅತಿಕ್ರಮಿಸಿದ್ದಾರೆ. ಪ್ರಶ್ನಿಸಿದವರ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಎಲ್ಲಾ ಕೃತ್ಯದ ಹಿಂದೆ ರಾಜಕೀಯದವರ ಕೈವಾಡವಿದೆ’ ಎಂದು ಅನುಮಾನವ್ಯಕ್ತಪಡಿಸಿದರು.
`ಮುಂದಿನ ಮೂರು ತಿಂಗಳ ಒಳಗೆ ಕಾನೂನಿನ ಪ್ರಕಾರ ಕ್ರಮವಾಗಬೇಕು. ಇಲ್ಲವಾದಲ್ಲಿ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು. ಗ್ರಾಪಂ ಉಪಾಧ್ಯಕ್ಷೆ ವಿಜಯಾ ಕೆ ನಾಯ್ಕ, ರವಿ, ನಾಗರಾಜ ತಾಂಡೇಲ, ರಾಜೇಶ ನಾಯ್ಕ, ಗಿರಿಜಾ ಗೌಡ, ಮಾದೇವಿ ಗೌಡ, ಮೀನಾಕ್ಣಿ ಆಗೇರ, ಚಂದ್ರಶೇಖರ ನಾಯ್ಕ, ದಯಾನಂದ ಮೆಹ್ತಾ, ಸವಿತಾ ನಾಯ್ಕ, ರಾಘವೇಂದ್ರ ಗೌಡ ಇತರರು ಇದಕ್ಕೆ ಧ್ವನಿಗೂಡಿಸಿದರು.