ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ವಂಚಿಸುವ ಜಾಲವೊಂದು ಜಿಲ್ಲೆಗೆ ಕಾಲಿರಿಸಿದೆ. ಕಾರವಾರದ ಪ್ರಮೋದ ನಾಯ್ಕ ಅವರ ಕುಟುಂಬ ಇಂಥ ಮೋಸದ ಬಲೆಗೆ ಬಿದ್ದಿದೆ.
ಉಚಿತ ಚಿಕಿತ್ಸೆ ಎಂಬ ನೆಪದಲ್ಲಿ ಜನರನ್ನು ಮಾತನಾಡಿಸುವ ಈ ಜನ ಅವರ ಮನೆಗೆ ತೆರಳಿ ಔಷಧಿ ಕೊಡುತ್ತಾರೆ. ಔಷಧಿಯ ಮೊತ್ತ ದುಬಾರಿ ಎಂದು ತಿಳಿಸಿ ಹಣಪಡೆಯುತ್ತಾರೆ. ನಂತರ ಆ ಹಣ ಮರಳಿ ಸಿಗುತ್ತದೆ ಎಂದು ಸಹ ನಂಬಿಸಿ ಅಲ್ಲಿಂದ ಪರಾರಿಯಾಗುತ್ತಾರೆ. ಕಾರವಾರದ ಪ್ರಮೋದ ನಾಯ್ಕ ಅವರು ಇಂಥ ಮೋಸಕ್ಕೆ ಬಲಿಯಾಗಿದ್ದು, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಸದಾಶಿವಗಡದ ದೇಸಾಯಿವಾಡದಲ್ಲಿ ಪ್ರಮೋದ ವಿಶ್ರಾಮ ನಾಯ್ಕ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅಕ್ಟೊಬರ್ 9ರಂದು ಪ್ರಮೋದ ನಾಯ್ಕ ಅವರ ಅಂಗಡಿ ಬಳಿ ಬಂದ ಅಪರಿಚಿತರು ಉಚಿತ ಔಷಧಿಯ ಆಫರ್ ನೀಡಿದರು. ಪ್ರಮೋದ ನಾಯ್ಕ ಅವರ ಮನೆ ವಿಳಾಸಪಡೆದು ಬೈಕಿನಲ್ಲಿ ಅಲ್ಲಿಗೆ ತೆರಳಿದರು. 35-40 ವರ್ಷದ ಆ ಇಬ್ಬರು ಆಗಂತುಕರು `ಮಕ್ಕಳಾಗದವರಿಗೆ ಮೆಡಿಸಿನ್ ಕೊಡುತ್ತೇವೆ’ ಎಂದು ನಂಬಿಸಿದರು. ಪ್ರಮೋದ ನಾಯ್ಕ ಅವರ ಪತ್ನಿ ಅಕ್ಷತಾ ನಾಯ್ಕ ಅವರು ಇದನ್ನು ನಂಬಿದರು.
`ಔಷಧ ವೆಚ್ಚ 40 ಸಾವಿರ ರೂಪಾಯಿ. ಅದು ನಿಮಗೆ ಮರಳಿ ಸಿಗುತ್ತದೆ’ ಎಂದು ತಿಳಿಸಿ ಹಣಪಡೆದರು. ಉಪಯೋಗಕ್ಕೆ ಬಾರದ ಔಷಧಿ-ದ್ರಾವಣ ನೀಡಿ ಅವರಿಬ್ಬರು ಅಲ್ಲಿಂದ ಪರಾರಿಯಾದರು. ಮನೆಗೆ ಬಂದ ಪ್ರಮೋದ ನಾಯ್ಕ ಅವರಿಗೆ ಈ ವಿಷಯ ಗೊತ್ತಾಯಿತು. ಅಪರಿಚಿತರ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಸದ್ಯ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಹುಡುಕಾಟ ಶುರು ಮಾಡಿದ್ದಾರೆ.