ಮೇಕಪ್ ಮಾಡಿಕೊಳ್ಳುವುದಕ್ಕಾಗಿ ಶಿರಸಿಯ ಬ್ಯೂಟಿ ಪಾರ್ಲರ್’ಗೆ ಭೇಟಿ ನೀಡಿದ್ದ ಶಾಂತಲಾ ಹೆಗಡೆ ಅವರಿಗೆ ಲಕ್ಷ ಲಕ್ಷ ರೂ ಮೋಸವಾಗಿದೆ. ಮಾತಿನ ಮೋಡಿ ಮಾಡಿದ ಶ್ರೇಯಾ ವರ್ಣೇಕರ್ ಅವರು ಪಾತಿಮಾ ಎಂಬಾತರ ನೆರವಿನಿಂದ 3 ಲಕ್ಷ ರೂಪಡೆದು ಯಾಮಾರಿಸಿದ್ದಾರೆ!
ಶಿರಸಿ ಕುಳವೆಯ ಶಾಂತಲಾ ಅನಿರುದ್ಧ ಹೆಗಡೆ ಅವರು ಸದ್ಯ ಬೆಂಗಳೂರು ನಿವಾಸಿ. 2023ರ ಸೆಪ್ಟೆಂಬರ್ ಮೊದಲ ವಾರ ಅವರು ಬಸ್ತಿಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರಿಗೆ ಭೇಟಿ ಕೊಟ್ಟಿದ್ದರು. ಶ್ರೇಯಾ ಬ್ಯೂಟಿ ಪಾರ್ಲರ್ ಮಾಲಕಿ ಶ್ರೇಯಾ ಸಂತೋಷ ವರ್ಣೇಕರ್ ಅವರು ಮಾತಿನ ನಡುವೆ ಸರ್ಕಾರಿ ಉದ್ಯೋಗದ ಬಗ್ಗೆ ಪ್ರಸ್ತಾಪಿಸಿದರು. `ನನಗೆ ಪರಿಚಯವಿರುವ ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಹಣ ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುತ್ತಾರೆ’ ಎಂದು ಶ್ರೇಯಾ ವರ್ಣೇಕರ್ ಅವರು ನಂಬಿಸಿದರು.
ಅದಾದ ನಂತರ `ಅರಣ್ಯ ಇಲಾಖೆಯಲ್ಲಿ ಕ್ಲರ್ಕ ಹುದ್ದೆ ಖಾಲಿಯಿದ್ದು, ಹಣ ಕೊಟ್ಟರೆ ಅದನ್ನು ಕೊಡಿಸುವೆ’ ಎಂದು ಶ್ರೇಯಾ ವರ್ಣೇಕರ್ ಅವರು ಭರವಸೆ ನೀಡಿದರು. ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಅರಣ್ಯ ಇಲಾಖೆಯಲ್ಲಿ ಪಿಲ್ಡ್ ಆಫಿಸರ್ ಆಗಿದ್ದು, ಅವರೇ ಎಲ್ಲಾ ಕೆಲಸ ಮಾಡಿಕೊಡುತ್ತಾರೆ ಎಂದು ಪುಸಲಾಯಿಸಿದರು. ಸರ್ಕಾರಿ ಕೆಲಸದ ಆಸೆಗಾಗಿ 2023ರ ಮಾರ್ಚ 28ರಂದು ಶಾಂತಲಾ ಹೆಗಡೆ ಅವರು ಫೋನ್ ಪೇ ಮೂಲಕ 50 ಸಾವಿರ ರೂ ವರ್ಗಾಯಿಸಿದರು. ಪಾತಿಮಾ ಅವರ ಖಾತೆಗೆ ಈ ಹಣ ಜಮಾ ಆಗಿದ್ದು, 2023ರ ನವೆಂಬರ್ 29ರಂದು ಮತ್ತೆ 25 ಸಾವಿರ ರೂ ಕಳುಹಿಸಿದರು.
ಕಾಸು ಕೊಟ್ಟರೆ ಸರ್ಕಾರಿ ಕೆಲಸ ಸಿಗುವ ಬಗ್ಗೆ ಶಾಂತಲಾ ಹೆಗಡೆ ಅವರ ತಂಗಿ ಶೀತಲ್ ಭಟ್ಟ ಅವರ ಮೂಲಕ ಅವರ ಸ್ನೇಹಿತೆ ಕೀರ್ತಿ ಅವರಿಗೆ ಗೊತ್ತಾಯಿತು. ಕೀರ್ತಿ ಅವರು ಸಹ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಿದ್ದು, ಶೀತಲ್ ಭಟ್ಟ ಅವರ ಫೋನ್ ಪೇ ಮೂಲಕ ಕೀರ್ತಿ ಅವರ ಪರವಾಗಿ 50 ಸಾವಿರ ರೂಪಾಯಿ ವರ್ಗಾಯಿಸಿದರು. ಇದಾದ ಮೇಲೆ ಶಾಂತಲಾ ಹೆಗಡೆ ಅವರು ಸಹ 30 ನವೆಂಬರ್ 2023ರಂದು ಮತ್ತೆ 50 ಸಾವಿರ ರೂಪಾಯಿಗಳನ್ನು ಪಾತಿಮಾ ಅವರ ಖಾತೆಗೆ ಕಳುಹಿಸಿದ್ದು, ಆ ವೇಳೆ ಪಾತಿಮಾ ಅವರೇ 25 ಸಾವಿರ ರೂ ಹಣಮರಳಿಸಿ ಇನ್ನಷ್ಟು ನಂಬಿಕೆಗಿಟ್ಟಿಸಿಕೊoಡರು.
ಕೀರ್ತಿ ಅವರು ಮತ್ತೆ ತಮ್ಮ ಪರವಾಗಿ ಶೀತಲ್ ಭಟ್ಟ ಅವರ ಫೋನಿನಿಂದ 50 ಸಾವಿರ ರೂ ಹಣವನ್ನು ಪಾತಿಮಾ ಅವರಿಗೆ ವರ್ಗಾಯಿಸಿದರು. 2023ರ ಡಿಸೆಂಬರ್ 3ರಂದು ಮತ್ತೆ ಶೀತಲ್ ಭಟ್ಟ ಅವರ ಪರವಾಗಿ ಶಾಂತಲಾ ಹೆಗಡೆ ಅವರು ಇನ್ನೊಮ್ಮೆ 1 ಲಕ್ಷ ರೂ ಹಣ ವರ್ಗಾಯಿಸಿದರು. ಆದರೆ, ಎರಡು ವರ್ಷ ಕಾದರೂ ಅವರಿಗೆ ಸರ್ಕಾರಿ ನೌಕರಿ ಸಿಗಲಿಲ್ಲ. ಅರಣ್ಯ ಇಲಾಖೆಯಿಂದ ಪತ್ರವೂ ಬರಲಿಲ್ಲ.
ಕಾಸುಪಡೆದು ಮೋಸ ಮಾಡಿದ ಬಗ್ಗೆ ಶಾಂತಲಾ ಹೆಗಡೆ ಅವರು ವಿಚಾರಿಸಿದಾಗ ಅಲ್ಲಿನ ಯಶೋಧಾ ರಾಘವೇಂದ್ರ ರಾಯ್ಕರ್ ಅವರು 50 ಸಾವಿರ ರೂ ಹಣಕೊಟ್ಟು ಮೋಸ ಹೋದ ವಿಷಯ ಅರಿವಿಗೆ ಬಂದಿತು. ಬ್ಯೂಟಿ ಪಾರ್ಲರಿನ ಶ್ರೇಯಾ ವರ್ಣೇಕರ್ ಹಾಗೂ ಪಾತಿಮಾ ಜಾಸ್ಮಿನ್ ಶೇಖ್ ಸೇರಿ ಜನರನ್ನು ಮೋಸ ಮಾಡುತ್ತಿರುವ ಬಗ್ಗೆ ಶಾಂತಲಾ ಹೆಗಡೆ ಅವರು ಪೊಲೀಸರಿಗೆ ದೂರಿದರು. ತಮಗಾದ ಅನ್ಯಾಯದ ಬಗ್ಗೆ ವಿವರಿಸಿ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.