ಬಸ್ ನಿಲ್ದಾಣ, ದೇವಾಲಯ ಮುಂಭಾಗ, ರಸ್ತೆ ಬದಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್ ಕದಿಯುತ್ತಿದ್ದ ಕಳ್ಳರು ಇದೀಗ ಶೋರೂಮಿಗೆ ನುಗ್ಗಿ ಅಲ್ಲಿದ್ದ ವಾಹನ ಅಪಹರಿಸಲು ಶುರು ಮಾಡಿದ್ದಾರೆ. ಜೊಯಿಡಾದ ಬೈಕ್ ಶೋರೂಮಿನ ಬಾಗಿಲು ಒಡೆದ ಕಳ್ಳರು ಅಲ್ಲಿದ್ದ ಎರಡು ಸ್ಕೂಟಿ ಕದ್ದಿದ್ದಾರೆ!
ಜೊಯಿಡಾದ ರಾಮನಗರದ ಬೆಳಗಾವಿ ರಸ್ತೆಯಲ್ಲಿ ಅಮೀತ ಭಾಸ್ಕರ ದೇಸಾಯಿ ಅವರು ಹೊಂಡಾ ಶೋರೂಮ್ ನಡೆಸುತ್ತಿದ್ದಾರೆ. ಅಲ್ಲಿನ ರಾಜ್ ಪ್ಯಾಲೇಸ್ ಎದುರಿಗಿರುವ ಸಾಯಿ ಸಮರ್ಥ ಹೊಂಡಾ ಶೋರೂಮಿಗೆ ಅವರು ಮಾಲಕರಾಗಿದ್ದಾರೆ. ಸದ್ಯ ಅವರ ಶೋರೂಮಿನಲ್ಲಿದ್ದ ಎರಡು ಸ್ಕೂಟಿ ಕಾಣೆಯಾಗಿದೆ. ಎಲ್ಲಿ ಹುಡುಕಿದರೂ ಆ ಎರಡು ಸ್ಕೂಟಿ ಕಾಣಲಿಲ್ಲ. ಲಕ್ಷಾಂತರ ರೂ ಹೂಡಿಕೆ ಮಾಡಿ ತಂದಿರಿಸಿದ್ದ ಸ್ಕೂಟಿ ಕಾಣೆಯಾಗಿದ್ದರಿಂದ ಶೋರೂಮಿನ ಮಾಲಕ ಅಮಿತ ದೇಸಾಯಿ ಅವರು ಕಂಗಾಲಾಗಿದ್ದಾರೆ.
ಅಕ್ಟೊಬರ್ 19ರ ರಾತ್ರಿ ಕಳ್ಳರು ಹೊಂಡಾ ಶೋರೂಮಿಗೆ ನುಗ್ಗಿದ್ದಾರೆ. ಅಲ್ಲಿದ್ದ 77 ಸಾವಿರದ ಹೊಂಡಾ ಆಕ್ಟಿವಾ 110 ಜೊತೆ 87 ಸಾವಿರದ ಹೊಂಡಾ ಆಕ್ಟಿವಾ ಸ್ಪೇಶಲ್ ಎಡಿಶನ್ ಸ್ಕೂಟಿಯನ್ನು ಅವರು ಕದ್ದಿದ್ದಾರೆ. ಅಕ್ಟೊಬರ್ 20ರಂದು ಮಳಿಗೆಯ ಬಾಗಿಲು ತೆರೆದಾಗ ಸ್ಕೂಟಿ ಅಪಹರಣವಾಗಿರುವುದು ಗೊತ್ತಾಗಿದೆ. ಶೋರೂಮಿಗೆ ಹಾಕಿದ ಬೀಗ ಮುರಿದು ಕಳ್ಳರು ಸ್ಕೂಟಿ ಕದ್ದಿದ್ದು, 1.64 ಲಕ್ಷ ರೂ ಮೌಲ್ಯದ ವಾಹನ ಕಾಣೆಯಾದ ಬಗ್ಗೆ ಅಮೀತ ದೇಸಾಯಿ ಅವರು ತಲೆಕೆಡಿಸಿಕೊಂಡಿದ್ದಾರೆ.
ಸ್ಕೂಟಿ ಕಳ್ಳರ ಪತ್ತೆಗಾಗಿ ಅಮೀತ ದೇಸಾಯಿ ಅವರು ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಅವರು ಕಳ್ಳತನದ ಪ್ರಕರಣ ದಾಖಲಿಸಿದ್ದು, `ಸ್ಕೂಟಿ ಕಳ್ಳರನ್ನು ಹುಡುಕಿ ತಮ್ಮ ವಾಹನ ಮರಳಿಸಿ’ ಎಂದು ಕೇಳಿಕೊಂಡಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ವಿವಿಧ ಆಯಾಮಗಳ ಆಧಾರದಲ್ಲಿ ಕಳ್ಳರ ಹುಡುಕಾಟ ನಡೆಸಿದ್ದಾರೆ.
ಕಳ್ಳತನ ತಪ್ಪಿಸಲು ಗುಣಮಟ್ಟದ ಕ್ಯಾಮರಾ ಅಳವಡಿಸಿ: ನಿಮ್ಮ ಅಗತ್ಯಕ್ಕೆ ಅನುಗುಣವಾದ ಕ್ಯಾಮರಾ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ: AMAZON