ಉತ್ತರ ಕನ್ನಡ ಜಿಲ್ಲೆಯ ಕೆಲಭಾಗದಲ್ಲಿ ಗುಡುಗುಸಹಿತ ಮಳೆಯಾಗಿದ್ದು, ಕುಮಟಾ ತಹಶೀಲ್ದಾರ್ ಕಚೇರಿಗೆ ಸಿಡಿಲು ಬಡೆದಿದೆ. ಪರಿಣಾಮ ಆಡಳಿತ ಸೌಧದ ನಾಮಫಲಕದ ಎರಡು ಅಕ್ಷರ ಕಣ್ಮರೆಯಾಗಿದೆ.
ಗುರುವಾರ ಮಧ್ಯಾಹ್ನ ಕುಮಟಾದಲ್ಲಿ ಗುಡುಗುಸಹಿತ ಮಳೆ ಸುರಿಯಿತು. ಈ ನಡುವೆ ಸಿಡಿಲು ಕಾಣಿಸಿಕೊಂಡಿತು. ತಾಸುಗಳ ಕಾಲ ಸುರಿದ ಮಳೆಯಿಂದ ಜನ ಹೈರಣಾದರು. ಮೂರೂರು ರಸ್ತೆಯಲ್ಲಿರುವ ತಾಲೂಕಾ ಆಡಳಿತ ಸೌಧದ ಕಟ್ಟಡಕ್ಕೆ ಸಿಡಿಲು ಬಡಿದಿದ್ದು, ಕಟ್ಟಡದ ಮುಂದಿನ ಭಾಗಕ್ಕೆ ಹಾನಿ ಸಂಭವಿಸಿತು. ಅಲ್ಲಿ `ತಾಲೂಕಾ ಆಡಳಿತ ಸೌಧ’ ಹಾಗೂ `ಕುಮಟಾ’ ಎಂದು ಲಗತ್ತಿಸಿದ್ದ ಅಕ್ಷರಗಳು ಸಿಡಿಲಿಗೆ ತುಂಡಾದವು. ತಳಭಾಗ ಬಂದು ನೋಡಿದರೂ ಆ ಅಕ್ಷರಗಳು ಕಾಣಲಿಲ್ಲ. ಹೀಗಾಗಿ ಸಿಡಿಲಿನ ಆರ್ಭಟಕ್ಕೆ ಆ ಅಕ್ಷರಗಳು ಸುಟ್ಟಿರುವ ಶಂಕೆವ್ಯಕ್ತವಾಯಿತು.
ಸಿಡಿಲಿನ ಅಬ್ಬರಕ್ಕೆ ತಾಲೂಕಾ ಆಡಳಿತ ಸೌಧದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಸರ್ಕಾರಿ ಕಚೇರಿ ಒಳಭಾಗ ಕತ್ತಲು ಆವರಿಸಿದ್ದು, ಕೆಲಸ ಕಾರ್ಯಗಳಿಗೆ ಸಮಸ್ಯೆ ಆಯಿತು. ಮಳೆ ಜೋರಾಗಿದ್ದ ಕಾರಣ ಆ ಕ್ಷಣಕ್ಕೆ ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸ ಮಾಡಲಿಲ್ಲ. ಸಿಡಿಲಿನಿಂದ ವಿದ್ಯುತ್ ಸಂಪರ್ಕ ಕಡಿತವಾಗಿದನ್ನು ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ದೃಢೀಕರಿಸಿದರು.
ತಹಶೀಲ್ದಾರ್ ಕಚೇರಿ ಮಾತ್ರವಲ್ಲದೇ ಕುಮಟಾದ ಅನೇಕ ಕಡೆ ಸಿಡಿಲಿನ ಕಾರಣ ವಿದ್ಯುತ್ ವಾಹಕಗಳು ಸುಟ್ಟು ಹೋದವು. ಸಂಜೆ ವೇಳೆ ಮಳೆ ಕೊಂಚ ಕಡಿಮೆಯಾಗಿದ್ದು, ಹೆಸ್ಕಾಂ ಸಿಬ್ಬಂದಿ ಅದನ್ನು ಸರಿಪಡಿಸುವ ಕೆಲಸ ಶುರು ಮಾಡಿದರು.