ಶಿರಸಿ ನಗರಸಭೆ ಹೆಸರಿನಲ್ಲಿ ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಫೋಟೋ ಬಹಿರಂಗವಾಗಿದೆ. ಆದರೆ, `ಹಣ ವಸೂಲಿ ಮಾಡುವವರ ಬಗ್ಗೆ ಮಾಹಿತಿ ಕೊಡಿ’ ಎಂದು ಶಿರಸಿ ನಗರಸಭೆ ನೀಡಿದ ಸಂಖ್ಯೆಗೆ ಫೋನ್ ಸಂಪರ್ಕವೇ ಇಲ್ಲ!
ಶಿರಸಿಯ ವಿವಿಧ ಗಲ್ಲಿ ಗಲ್ಲಿಗೆ ತೆರಳುವ ಇಬ್ಬರು ನಗರಸಭೆ ಹೆಸರಿನಲ್ಲಿ ಹಣ ಕೇಳಿದ್ದಾರೆ. ಹಣ ಕೊಟ್ಟವರಿಗೆ ಅಧಿಕೃತ ರಸೀದಿ ಕೊಟ್ಟಿಲ್ಲ. ಕೊಟ್ಟ ಹಣಕ್ಕೆ ತಕ್ಕ ಕೆಲಸವನ್ನು ಮಾಡಿಕೊಟ್ಟಿಲ್ಲ. ಹೀಗಾಗಿ ಹಣ ಕೊಟ್ಟವರು ನಗರಸಭೆಯನ್ನು ಪ್ರಶ್ನಿಸಿದ್ದು, ಆ ವೇಳೆ ನಗರಸಭೆಗೆ ಸಂಬoಧವೇ ಇಲ್ಲದವರು ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ.
ನಗರಸಭೆ ಹೆಸರು ಹಾಳಾಗುತ್ತಿರುವುದರಿಂದ ಆತಂಕಕ್ಕೆ ಒಳಗಾದ ಪೌರಾಯುಕ್ತರು ತುರ್ತು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. `ನಗರಸಭೆ ಹೆಸರನ್ನು ಹೇಳಿ ಹಣ ಕೇಳುವವರನ್ನು ನಂಬಬೇಡಿ’ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಪರಿಚಿತರು ಹಣ ಕೇಳಿದರೆ ತಕ್ಷಣ 08384-226338ಗೆ ಫೋನ್ ಮಾಡುವಂತೆ ಮನವಿಯನ್ನು ಮಾಡಿದ್ದಾರೆ. ಆದರೆ, ಆ ಫೋನ್ ನಂ ಸರಿಯಾಗಿಲ್ಲ. ಫೋನ್ ಮಾಡಿದರೆ `ಔಟ್ ಆಫ್ ಆರ್ಡರ್’ ಎಂಬ ಧ್ವನಿ ಬರುತ್ತಿದ್ದು, ಆ ಸಂಖ್ಯೆಗೆ ಫೋನ್ ಸಂಪರ್ಕವೇ ಇಲ್ಲ!
ಇನ್ನೂ, ನಗರಸಭೆ ನೀಡಿದ ಪ್ರಕಟಣೆಯಲ್ಲಿ `ಅಪರಿಚಿತರು ಹಣ ಕೇಳಿದರೆ ಪೊಲೀಸ್ ದೂರು ನೀಡಿ’ ಎಂದು ಕೋರಲಾಗಿದೆ. ಹೀಗಾಗಿ ನಗರಸಭೆ ಹೆಸರಿನಲ್ಲಿ ಯಾರೇ ಹಣ ಕೇಳಿದರೂ ಪೊಲೀಸರಿಗೆ ಫೋನ್ ಮಾಡುವುದು ಮಾತ್ರ ಜನರಿಗಿರುವ ದಾರಿಯಾಗಿದೆ.