ಉತ್ತರ ಕನ್ನಡ ಜಿಲ್ಲೆಯಲ್ಲಿ ಒಮ್ಮೆ ನಿಯಂತ್ರಣಕ್ಕೆ ಬಂದಿದ್ದ `ಇಲಿ ಜ್ವರ’ ಇದೀಗ ಮತ್ತೆ ಜನರನ್ನು ಕಾಡಿಸುತ್ತಿದೆ. ಯಲ್ಲಾಪುರದ ಕಿರವತ್ತಿ ಬಳಿಯ ಜೋಗಿಕೊಪ್ಪದಲ್ಲಿ ವ್ಯಕ್ತಿಯೊಬ್ಬರಿಗೆ ಈ ಜ್ವರ ಕಾಣಿಸಿದೆ. ಈ ವರ್ಷವೇ ಯಲ್ಲಾಪುರದಲ್ಲಿ ಒಟ್ಟು ಏಳು ಇಲಿ ಜ್ವರ ಪ್ರಕರಣಗಳು ವರದಿಯಾಗಿದೆ.
ಇಲಿಯ ಮೂತ್ರದಿಂದ ಈ ಜ್ವರ ಹರಡುತ್ತದೆ. ಈ ರೋಗಕ್ಕೆ ಒಳಗಾದವರು ಜ್ವರ, ತಲೆ ನೋವು, ಆಯಾಸ, ಮೈ-ಕೈ ನೋವಿನಿಂದ ಬಳಲುತ್ತಾರೆ. `ಸಕಾಲದಲ್ಲಿ ರೊಗಕ್ಕೆ ಚಿಕಿತ್ಸೆಪಡೆದರೆ ಯಾವುದೇ ಸಮಸ್ಯೆ ಇಲ್ಲ. ರೋಗ ಉಲ್ಬಣಿಸಿದರೆ ಅಪಾಯ ಖಚಿತ’ ಎನ್ನುತ್ತಾರೆ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್. `ಇಲಿ ಜ್ವರ ಮನುಷ್ಯರ ಜೊತೆ ಜಾನುವಾರುಗಳಿಗೆ ಸಹ ಬಾಧಿಸುತ್ತದೆ. `ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಾ ರೋಹ ಹರಡುವಿಕೆಗೆ ಮುಖ್ಯ ಕಾರಣ. ರೋಗ ಲಕ್ಷಣ ಕಾಣಿಸಿದ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಎಲ್ಲಾ ರೀತಿಯಲ್ಲಿಯೂ ಉತ್ತಮ ವಿಧಾನ’ ಎಂದು ಆರೋಗ್ಯ ಇಲಾಖೆಯ ಡಾ ಗಿರೀಶಗೌಡರ ತಿಮ್ಮನಗೌಡರ ಅರಿವು ಮೂಡಿಸಿದ್ದಾರೆ.
`ಕಲುಷಿತ ನೀರಿನ ಮೂಲಕವು ಈ ರೋಗ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ನೀರು ನಿಲ್ಲುವ ಸ್ಥಳಗಳ ಬಗ್ಗೆಯೂ ಎಚ್ಚರಿಕೆವಹಿಸುವುದು ಅಗತ್ಯ. ಕಲುಷಿತ ನೀರು ಹಾಗೂ ಮಣ್ಣಿನೊಂದಿಗೆ ಕೆಲಸ ಮಾಡುವಾಗ ಕೈಗವಸು ಹಾಗೂ ಕಾಲಿಗೆ ಬೂಟು ಧರಿಸುವುದು ಉತ್ತಮ ಬೆಳವಣಿಗೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜೊಸೆಫ್ ಯು ವಿವರಿಸಿದ್ದಾರೆ. `ಮನೆಯಿಂದ ಹೊರಹೋಗಿ ಬಂದ ನಂತರ ಕೈ-ಕಾಲುಗಳನ್ನು ತೊಳೆಯುವುದು ಒಳ್ಳೆಯ ಪದ್ಧತಿ. ಕುಡಿಯುವ ನೀರು ಹಾಗೂ ಆಹಾರ ಸೇವನೆ ವಿಷಯದಲ್ಲಿ ಶುದ್ಧತೆ ಅತೀ ಅಗತ್ಯ. ಇಲಿ ಬಾರದ ರೀತಿ ಮನೆಯನ್ನು ಸ್ವಚ್ಚವಾಗಿರಿಸಿಕೊಂಡರೆ ರೋಗದಿಂದ ದೂರವಿರಲು ಸಾಧ್ಯ. ಸಾಕು ಪ್ರಾಣಿಗಳು ವಾಸಿಸುವ ಪ್ರದೇಶಗಳು ಸ್ವಚ್ಛವಾಗಿರಬೇಕು’ ಎಂದು ಆರೋಗ್ಯ ಇಲಾಖೆಯ ಮಹೇಶ ತಾಳಿಕೋಟಿ ಮಾಹಿತಿ ನೀಡಿದರು.
ರೋಗ ಲಕ್ಷಣಗಳಿರುವ ಕಡೆ ಸಮುದಾಯ ಆರೋಗ್ಯ ಅಧಿಕಾರಿ ಶಿವನಗೌಡ ಪಾಟೀಲ ಹಾಗೂ ಆಶಾ ಮತು ಅಂಗನವಾಡಿ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. `ಇಲಿ ಜ್ವರ ತಡೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ ಅವರು ಮನವಿ ಮಾಡಿದರು.