ಅಭಿವೃದ್ಧಿ ಹೆಸರಿನಲ್ಲಿ ಜನರ ಜೀವನದ ಜೊತೆ ಆಟವಾಡುತ್ತಿರುವ ಬಂದರು ಯೋಜನೆ ವಿರೋಧಿಸಿ ಅಂಕೋಲಾದಲ್ಲಿ ಮಂಗಳವಾರ ಅಣಕು ಶವಯಾತ್ರೆ ನಡೆದಿದೆ. 5 ಸಾವಿರಕ್ಕೂ ಅಧಿಕ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
`ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಹೂಡಿಕೆ ಕಂಪನಿ JSW ಯೋಜನೆಯಿಂದ ಹಿಂದೆ ಸರಿದಿಲ್ಲ. ಹೀಗಾಗಿ ಕರಾಳ ದಿನ ಆಚರಿಸುತ್ತಿದ್ದೇವೆ’ ಎಂದು ಪ್ರತಿಭಟನೆಯಲ್ಲಿದ್ದವರು ಹೇಳಿದರು. ಅಂಕೋಲಾ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೇಣಿ ಬಂದರು ಯೋಜನೆಯನ್ನು ವಿರೋಧಿಸಿದರು.
ಕೇಣಿ ಬಂದರು ಯೋಜನೆ ವಿರೋಧಿಸದ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. `ಸಾವಿರಾರು ಜನರ ಕೂಗಿಗೆ ಸರಕಾರ ಸ್ಪಂದಿಸುವ ಕೆಲಸ ಮಾಡಡಿಲ್ಲ’ ಎಂದು ಪ್ರತಿಭಟನೆ ಪ್ರಮುಖ ಸಂಜೀವ ಬಲೇಗಾರ ಆಕ್ರೋಶವ್ಯಕ್ತಪಡಿಸಿದರು. `ಬಂದರು ನಿರ್ಮಾಣ ಕಾರ್ಯ ಮುಂದುವರೆಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೆ ಸರಿಯುವುದಿಲ್ಲ’ ಎಂದು ಎಚ್ಚರಿಸಿದರು. `ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮೀನುಗಾರಿಕೆ ಮಂತ್ರಿ ಆದರು ಮೀನುಗಾರರ ಅಳಲನ್ನು ಒಮ್ಮೆಯು ಕೇಳಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
ಕೇಣಿ ವಾಣಿಜ್ಯ ಬಂದರು ವಿರೋಧಿಸಿ 14 ದಿನಗಳಿಂದ ಧರಣಿ ನಡೆಯುತ್ತಿದೆ. ಈ ದಿನ ಕರೆ ನೀಡಿದ ಅಂಕೋಲಾ ಬಂದಿಗೆ ವಕೀಲರ ಸಂಘ, ಕಿಸಾಸ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಿದ್ದರಿಂದ ಮಧ್ಯಾಹ್ನ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸ್ಥಳಕ್ಕೆ ದಾವಿಸಿ ಅಳಲು ಆಲಿಸಿದರು. `ಅಹವಾಲು ಸಭೆಯ ವರದಿಯನ್ನು ಪಾರದರ್ಶಕವಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ದಿನದ ಪ್ರತಿಭಟನೆಯ ವಿಷಯವನ್ನು ಮುಖ್ಯಮಂತ್ರಿಗೆ ತಿಳಿಸುವೆ’ ಎಂದವರು ಹೇಳಿದರು.