ಹಣಕಾಸು ವಿಷಯವಾಗಿ ಕಾರವಾರದ ಗಿರಿಧರ ತಾಂಡೇಲ್ ಹಾಗೂ ಸುರೇಶ್ ದುರ್ಗೇಕರ್ ಅವರ ನಡುವೆ ವೈಮನಸ್ಸು ಮೂಡಿದ್ದು, ಸುರೇಶ ದುರ್ಗೇಕರ್ ಅವರು ಕಬ್ಬಿಣದ ರಾಡಿನಿಂದ ಗಿರಿಧರ ತಾಂಡೇಲ್ ಅವರ ತಲೆಗೆ ಹೊಡೆದದ್ದಾರೆ. ಸದ್ಯ ಗಿರಿಧರ ತಾಂಡೇಲ್ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆಯುತ್ತಿದ್ದಾರೆ.
ಕಾರವಾರದ ಗಿರಿಧರ ಈರಾ ತಾಂಡೇಲ್ ಅವರು ಮೀನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮುದುಗಾ ಸೀಬರ್ಡ ಕಾಲೋನಿಯಲ್ಲಿ ವಾಸಿಸುವ ಸುರೇಶ ದೇವು ದುರ್ಗೇಕರ್ ಅವರು ಗಿರಿಧರ ತಾಂಡೇಲ್ ಅವರ ಸ್ನೇಹಿತರಾಗಿದ್ದರು. ಹೀಗಿರುವಾಗ ತುರ್ತಾಗಿ ಗಿರಿಧರ ತಾಂಡೇಲ್ ಅವರಿಗೆ 50 ಸಾವಿರ ರೂ ಅಗತ್ಯವಿದ್ದು, ಸ್ನೇಹಿತನ ಬಳಿ ಅವರು ನೆರವು ಯಾಚಿಸಿದ್ದರು. ಆಗ, ಸುರೇಶ ದುರ್ಗೇಕರ್ ಅವರು 50 ಸಾವಿರ ರೂ ಸಹಾಯ ಮಾಡಿದ್ದರು.
ಆದರೆ, ಗಿರಿಧರ ತಾಂಡೇಲ್ ಅವರು ಆ ಹಣವನ್ನು ಸಕಾಲಕ್ಕೆ ಮರಳಿಸಿರಲಿಲ್ಲ. ಸುರೇಶ ದುರ್ಗೇಕರ್ ಅವರು ಸಾಕಷ್ಟು ಬಾರಿ ಕೇಳಿದರೂ ಗಿರಿಧರ್ ತಾಂಡೇಲ್ ಅವರು ಹಣ ಕೊಟ್ಟಿರಲಿಲ್ಲ. ಹಣ ಮರಳಿಸಬೇಕು ಎಂಬ ಮನಸ್ಸಿದ್ದರು ಗಿರಿಧರ ತಾಂಡೇಲ್ ಅವರ ಬಳಿ ಕಾಸು ನಿಲ್ಲುತ್ತಿರಲಿಲ್ಲ. ಮೀನುಗಾರಿಕೆ ಮಾಡಿಕೊಂಡು ಜೀವಿಸುತ್ತಿದ್ದ ಗಿರಿಧರ ತಾಂಡೇಲ್ ಅವರು `ನಿಧಾನವಾಗಿ ಕಾಸು ಕೊಡುವೆ ಎಂದರೂ ಅದಕ್ಕೆ ಸುರೇಶ್ ದುರ್ಗೇಕರ್ ಅವರು ಒಪ್ಪಿರಲಿಲ್ಲ.
ಹೀಗಿರುವಾಗ ನವೆಂಬರ್ 11ರಂದು ಗಿರಿಧರ ತಾಂಡೇಲ್ ಅವರು ಮುದುಗಾ ಬಂದರಿನಿoದ ಪರ್ಶಿಯನ್ ಬೋಟ್ ಮೇಲೆ ಮೀನುಗಾರಿಕೆಗೆ ತೆರಳಿ ಮರಳಿದ್ದರು. ಅಲ್ಲಿಂದ ಮುಂದೆ ಅವರು ಸ್ಕೂಟಿ ಮೇಲೆ ಮನೆ ಕಡೆ ಹೋಗುವಾಗ ಅಲ್ಲಿಗೆ ಬಂದ ಸುರೇಶ ದುರ್ಗೇಕರ್ ಸ್ಕೂಟಿ ಅಡ್ಡಗಟ್ಟಿ ಜಗಳ ಶುರು ಮಾಡಿದರು. ಕಾಸು ಕೊಡದ ಕಾರಣ ಸುರೇಶ ದುರ್ಗೇಕರ್ ಅವರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಗಿರಿಧರ ತಾಂಡೇಲ್ ಅವರ ತಲೆಗೆ ಬಾರಿಸಿದರು. ಗಾಯಗೊಂಡ ಗಿರಿಧರ ತಾಂಡೇಲ್ ಅವರು ಆಸ್ಪತ್ರೆ ಸೇರಿದರು. ಈ ಎಲ್ಲಾ ವಿಷಯಗಳ ಬಗ್ಗೆ ಗಿರಿಧರ ತಾಂಡೇಲ್ ಅವರು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ’