ವಾಟ್ಸಪ್ ಮೂಲಕ ನಿಂದಿಸಿದ ವ್ಯಕ್ತಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಹಿನ್ನಲೆ ಜಯಂತ ಮೊಗೇರ ಅವರಿಗೆ ನಿಂದಿಸಿದ ವೆಂಕಟ್ರಮಣ ಮೊಗೇರ್ ಅವರ ವಿರುದ್ಧ ಕಾನೂನು ಕ್ರಮವಾಗಿದೆ.
ಮುರುಡೇಶ್ವರದ ಬೈಲೂರು ತೊದ್ದಳ್ಳಿಯ ಜಯಂತ ಮೊಗೇರ್ ಅವರು `ಶ್ರೀ ವೀರಮಾಸ್ತಿ ಯುವಕ ಸಂಘ ತೊದಳ್ಳಿ’ ಎಂಬ ವಾಟ್ಸಪ್ ಗುಂಪಿನಲ್ಲಿ ಸಾಮಾಜಿಕ ಸಮಸ್ಯೆಯೊಂದರ ಬಗ್ಗೆ ಧ್ವನಿ ಎತ್ತಿದ್ದರು. ದೋಣಿಗಳ ಹಿಂದೆ ಕುಳಿತು ಅನೈತಿಕ ಚಟುವಟಿಕೆ ನಡೆಸುವವರ ಬಗ್ಗೆ ಮಾತನಾಡಿದ ಜಯಂತ ನಾಗಪ್ಪ ಮೊಗೇರ ಅವರನ್ನು ವೆಂಕಟ್ರಮಣ ಮಂಜುನಾಥ ಮೊಗೇರ್ ಅವರು ಅದೇ ಗುಂಪಿನಲ್ಲಿ ನಿಂದಿಸಿದ್ದರು. ಇದೇ ವಿಷಯ ತಾರಕ್ಕೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
`ಕಡಲತೀರದಲ್ಲಿ ಬಳಕೆಯಾಗದಿರುವ ದೋಣಿ ಹಾಗೂ ಬೇರೆ ಊರಿನ ದೋಣಿಗಳಲ್ಲಿ ಸರಾಯಿ ಬಾಟಲಿಗಳಿವೆ. ದೋಣಿಗಳ ಮರೆಯಲ್ಲಿ ಕುಳಿತು ಪ್ರವಾಸಿಗರು ಮದ್ಯ ವ್ಯಸನದಲ್ಲಿ ತೊಡಗುತ್ತಿದ್ದು, ಹಾಳು ಬಿಟ್ಟಿರುವ ದೋಣಿ ಹಾಗೂ ಪರ ಊರಿನ ದೋಣಿ ಖುಲ್ಲಾ ಪಡಿಸಿದರೆ ಒಳಿತು’ ಎಂದು ಜಯಂತ ಮೊಗೇರ್ ಅವರು ಹೇಳಿದನ್ನು ತೊದಳ್ಳಿ ಕಲ್ಯಾಣಿಮನೆಯ ವೆಂಕಟ್ರಮಣ ಮೊಗೇರ್ ಅವರು ಸಹಿಸಿರಲಿಲ್ಲ. ತಮ್ಮನ್ನು ನಿಂದಿಸಿದವರ ವಿರುದ್ಧ ಕ್ರಮಕ್ಕಾಗಿ ಜಯಂತ ಮೊಗೇರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣ ಗಮನಿಸಿದ ನ್ಯಾಯಾಲಯ ವೆಂಕಟ್ರಮಣ ಮಂಜುನಾಥ ಮೊಗೇರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು.