ಯಲ್ಲಾಪುರದ ಅರಬೈಲ್ ಘಟ್ಟ ಪ್ರದೇಶದಲ್ಲಿ ಶನಿವಾರ ಸಂಚರಿಸುತ್ತಿದ್ದ ಟ್ಯಾಂಕರೊoದು ಹೊತ್ತಿ ಉರಿದಿದೆ. ಬೆಂಕಿ ಕಂಡ ತಕ್ಷಣ ಚಾಲಕ ಟ್ಯಾಂಕರಿನಿoದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಆoದ್ರಪ್ರದೇಶದ ಕರನೂಲಿನ ಶ್ರೀನಿವಾಸ ರೆಡ್ಡಿ ಅವರು ಸ್ಪಿರಿಟ್ ತುಂಬಿದ ಟ್ಯಾಂಕರ್ ಓಡಿಸುತ್ತಿದ್ದರು. ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಅವರು ಟ್ಯಾಂಕರ್ ಓಡಿಸಿಕೊಂಡು ಬಂದಿದ್ದರು. ಯಲ್ಲಾಪುರ ಪಟ್ಟಣದಲ್ಲಿ ನಿಧಾನವಾಗಿ ಚಲಿಸಿದ ಟ್ಯಾಂಕರ್ ಅರಬೈಲು ಪ್ರವೇಶಿಸುತ್ತಲೇ ವೇಗಪಡೆಯಿತು. ಪರಿಣಾಮ ಅರಬೈಲ್ ಇಳಿಜಾರಿನ ಮಾರುತಿ ದೇವಸ್ಥಾನದ ಎದುರು ಆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿತು.
ಟ್ಯಾಂಕರ್ ನೇರವಾಗಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿ ಹೊಡೆಯಿತು. ಆ ವೇಳೆ ನಡೆದ ಘರ್ಷಣೆಗೆ ಸಣ್ಣ ಬೆಂಕಿ ಕಿಡಿಯೊಂದು ಉದ್ಬವಿಸಿದ್ದು, ಅದೇ ಕಿಡಿ ದೊಡ್ಡ ಜ್ವಾಲೆಯಾಯಿತು. ಕ್ಷಣಮಾತ್ರದಲ್ಲಿ ಇಡೀ ಟ್ಯಾಂಕರ್ ಹೊತ್ತಿ ಉರಿಯಿತು. ಟ್ಯಾಂಕರ್ ಒಳಗಿದ್ದ ಸ್ಪಿರಿಟ್ ಸಹ ಜ್ವಾಲೆಯ ಪ್ರಮಾಣವನ್ನು ಹೆಚ್ಚಿಸಿದ್ದು, ಬೆಂಕಿ ಕಂಡ ತಕ್ಷಣ ಚಾಲಕ ಶ್ರೀನಿವಾಸ ರೆಡ್ಡಿ ಟ್ಯಾಂಕರಿನಿoದ ಕೆಳಗೆ ಹಾರಿದರು.
ಟ್ಯಾಂಕರಿಗೆ ಬೆಂಕಿ ಬಿದ್ದ ವಿಷಯ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಯಲ್ಲಾಪುರ ಪೊಲೀಸರು ವೇಗವಾಗಿ ಅಲ್ಲಿಗೆ ತೆರಳಿದರು. ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಸ್ಪಿರಿಟ್ ಇದ್ದ ಕಾರಣ ಲಾರಿ ಹೊತ್ತಿ ಉರಿಯಿತು. ಸ್ಪಿರಿಟ್ ಸಂಪೂರ್ಣವಾಗಿ ನಾಶವಾದ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿತು.