ಯಲ್ಲಾಪುರದ ಉಮ್ಮಚ್ಗಿಯಲ್ಲಿರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿದ ಮತ್ತಿಬ್ಬರ ಬಂಧನವಾಗಿದೆ. ಚಾಲಕ ಹಾಗೂ ಗುಜುರಿ ವ್ಯಾಪಾರಿ ಸಹ ಈ ಪ್ರಕರಣದ ಮಾಸ್ಟರ್ ಮೈಡ್ ಆಗಿದ್ದಾರೆ. ದರೋಡೆಗೆ ಬಂದ ಡಕಾಯಿತರು ಏನು ಸಿಗದ ಕಾರಣ ಬೆಂಕಿ ಹಚ್ಚಿ ಪರಾರಿ ಆಗಿದನ್ನು ಒಪ್ಪಿಕೊಂಡಿದ್ದಾರೆ.
ನವೆಂಬರ್ 12ರಂದು ಉಮ್ಮಚ್ಗಿಯಲ್ಲಿ ಬ್ಯಾಂಕ್ ದರೋಡೆ ಪ್ರಯತ್ನ ನಡೆದಿತ್ತು. ಉದ್ಯಮನಗರದ ರಾಘವೇಂದ್ರ ಗಣಪತಿ ನಾಯಕ ಅವರು ಡಕಾಯಿತರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಂಪ್ಯುಟರ್, ಪ್ರಿಂಟರ್, ವಿಲ್ಲಿಂಗ್ ಚೇರಿ ಸೇರಿ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾದ ಬಗ್ಗೆ ಅವರು ವಿವರಿಸಿದ್ದರು.
ಕಾರವಾರ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ನಾಲ್ಕು ತಂಡ ರಚಿಸಿ ಡಕಾಯತರ ಶೋಧಕ್ಕೆ ತಂತ್ರ ರೂಪಿಸಿದ್ದರು. ಕಾರವಾರ ಟೆಕ್ನಿಕಲ್ ವಿಭಾಗದ ಉದಯ ಗುನಗಾ ವಿವಿಧ ತಾಂತ್ರಿಕ ಮಾಹಿತಿ ನೀಡಿದರು. ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿದಾಗ ಶಿಪ್ಟ್ ಕಾರೊಂದರ ಮೇಲೆ ಅನುಮಾನ ಮೂಡಿತು. ಆ ಕಾರನ್ನು ಬೆನ್ನತ್ತಿದ ಪೊಲೀಸರು ಬೆಳಗಾವಿಗೆ ಹೋದರು. ಅಲ್ಲಿನ ಬಾರ್ ಒಂದರ ಮುಂದೆ ಮಂಗಳೂರಿನ ಬಂಟ್ವಾಳದ ಮಹಮ್ಮದ ರಫೀಕ ಎದುರಾದರು. ಪೊಲೀಸರನ್ನು ಕಂಡ ಮಹಮದ್ ರಫೀಕ್ ಅವರ ಮೇಲೆ ಚಾಕುವಿನ ದಾಳಿ ನಡೆಸಿದ್ದು, ಪೊಲೀಸರು ತಪ್ಪಿಸಿಕೊಂಡಾಗ ತಮಗೆ ತಾವೇ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು.
ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಮದ್ ರಫಿಕ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಬೆಳಗಾವಿಯ ಚಾಲಕ ಗುಲ್ಜಾರ ಅಬು ್ದಲ್ ರೆಹಮಾನ ಮಕಾಂದಾರ, ಗುಜುರಿ ವ್ಯಾಪಾರ ಮಾಡುವ ಇಮ್ರಾನ ಕುತಬುದ್ದೀನ್ ತಿಗಡಿ ಅವರನ್ನು ಪೊಲೀಸರು ವಶಕ್ಕೆಪಡೆದರು. ಅವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಆಪಾದಿತರಿಂದ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಮಹಮದ್ ರಫಿಕ್ ವಿರುದ್ಧ ರಾಜ್ಯದಲ್ಲಿ 50ಕ್ಕೂ ಅಧಿಕ ದರೋಡೆ ಪ್ರಕರಣಗಳಿವೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಮ್, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ರಾಜೇಶ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ
ಕಾಂಬಳೆ, ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ. ಮಹಮ್ಮದ್ ಶಫಿ ಶೇಖ್, ಬಸವರಾಜ ಹಗರಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಸಂತೋಷ ಬಾಳೇರ, ಮಹಾವೀರ ಡಿ ಎಸ್, ಪರಮೇಶ್ವರ ಎಸ್ ಕೆ. ಪರಶುರಾಮ ದೊಡ್ಮನಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.