ದಾಂಡೇಲಿಯ ಸೈಂಟ್ ಮೈಕಲ್ ಶಾಲೆಯ ಹತ್ತಿರ ಬೀದಿ ನಾಯಿಗಳ ಅಟ್ಟಹಾಸ ಜೋರಾಗಿದೆ. ಇಲ್ಲಿ ಸಂಚರಿಸುತ್ತಿದ್ದ ಐವರ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದೆ.
Advertisement. Scroll to continue reading.
ಶುಕ್ರವಾರ ಸಂಜೆ ವೈಷ್ಣವಿ ಮಾಲ್ವಿ ಅವರ ಮೇಲೆ ಏಕಾಏಕಿ ನಾಯಿಯೊಂದು ದಾಳಿ ಮಾಡಿತು. ನಾಯಿ ಕಚ್ಚಿದ ಪರಿಣಾಮ ವೈಷ್ಣವಿ ಅವರ ಕೈಯಿಂದ ರಕ್ತ ಸುರಿಯಲು ಶುರುವಾಯಿತು. ಅದರ ಬೆನ್ನಲ್ಲೆ ಸುಭಾಷ್ ನಗರದ ಐದು ವರ್ಷದ ಪುಟ್ಟ ಮಗುವಿನ ಮೇಲೆ ನಾಯಿಯ ಆಕ್ರಮಣ ನಡೆಯಿತು. ನಿರ್ಮಲ್ ನಗರದ ವೃದ್ಧೆ ರೋಜಿ ಡಯಾಸ್ ಅವರನ್ನು ನಾಯಿಯೊಂದು ಬೆನ್ನಟ್ಟಿ ಬಂದು ಕಚ್ಚಿತು. ಮತ್ತಿಬ್ಬರಿಗೂ ನಗರದಲ್ಲಿ ನಾಯಿ ದಾಳಿ ನಡೆದಿದ್ದು, ಎಲ್ಲರೂ ಚಿಕಿತ್ಸೆಗೆ ಒಳಗಾಗಿದ್ದಾರೆ.
ಕಳೆದ ಒಂದು ವರ್ಷದಿಂದ ದಾಂಡೇಲಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಪದೇ ಪದೇ ಬೀಡಾಡಿ ನಾಯಿಗಳ ಆಕ್ರಮಣ ಸುದ್ದಿಯಾಗುತ್ತಿದೆ. ಆದರೂ, ನಗರಸಭೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನಲೆ ಜನ ಆಕ್ರೋಶವ್ಯಕ್ತಪಡಿಸಿದ್ದು, ಸ್ಥಳೀಯ ಆಡಳಿತವನ್ನು ಟೀಕಿಸಿದ್ದಾರೆ. ಸಂತಾನಹರಣ ಚಿಕಿತ್ಸೆ ನೆಪದಲ್ಲಿ ಹಣ ವೆಚ್ಚವಾದರೂ ನಾಯಿಗಳ ನಿಯಂತ್ರಣ ಆಗದ ಬಗ್ಗೆ ಪ್ರಶ್ನಿಸಿದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.