ಕಾರವಾರದ ಶಿರವಾಡಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು ಅಲ್ಲಿನ ಅವ್ಯವಸ್ಥೆಗಳನ್ನು ನೋಡಿ ಕೆಂಡಾಮoಡಲರಾಗಿದ್ದಾರೆ. ಡಂಪಿoಗ್ ಯಾರ್ಡ್ ಘಟಕದ ಸುತ್ತಮುತ್ತಲಿನ ಅವೈಜ್ಞಾನಿಕ ಹಾಗೂ ಅಸ್ವಚ್ಛ ವಾತಾವರಣ ನೋಡಿ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ಘಟಕದ ಸುತ್ತ ಮಾಸ್ಕ್ ಧರಿಸಿ ಓಡಾಟ ನಡೆಸಿದ ಅವರು ನಂತರ ಮಾಸ್ಕನ್ನು ಗಡ್ಡಕ್ಕೆ ಹಾಕಿಕೊಂಡು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ
ಈ ವಿಷಯದಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದನ್ನು ಪ್ರಶ್ನಿಸಿ, ಆಕ್ರೋಶವ್ಯಕ್ತಪಡಿಸಿದರು. ಸ್ಥಳೀಯ ಪರಿಸರ ಹಾಳಾಗುತ್ತಿರುವುದು ಮತ್ತು ತ್ಯಾಜ್ಯ ಘಟಕದಲ್ಲಿ ಒಣ ಹಾಗೂ ಹಸಿ ಕಸದ ವಿಲೇವಾರಿ ಅತ್ಯಂತ ವಿಳಂಬವಾಗಿ ನಡೆಯುತ್ತಿರುವ ಬಗ್ಗೆಯೂ ಕಿಡಿಕಾರಿದರು. `ಘಟಕದಿಂದ ಹೊರಬರುವ ಕಲುಷಿತ ದ್ರವ ತ್ಯಾಜ್ಯವು ನೇರವಾಗಿ ಭೂಮಿಗೆ ಇಂಗುತ್ತಿದೆ. ಇದರಿಂಧ ಸುತ್ತಮುತ್ತಲಿನ ಬಾವಿ ಹಾಗೂ ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿವೆ’ ಎಂದು ಜನ ದೂರಿದರು. `ಸೊಳ್ಳೆ, ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುವ ಆತಂಕ ಎದುರಾಗಿದೆ’ ಎಂದು ಅಲ್ಲಿನವರು ವಿವರಿಸಿದರು. ಈ ಗಂಭೀರ ಸಮಸ್ಯೆಯ ಕುರಿತು ಸ್ವಯಂಪ್ರೇರಿತವಾಗಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಉಪಲೋಕಾಯುಕ್ತರು ಭರವಸೆ ನೀಡಿದರು. ಘಟಕದ ವೈಜ್ಞಾನಿಕ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ತಕ್ಷಣವೇ ನಿರ್ದೇಶನ ನೀಡಿದರು. `ಈ ಸಮಿತಿಯಲ್ಲಿ ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ, ಜಿ.ಪಂ. ಸಿಇಒ ಹಾಗೂ ವೈದ್ಯಾಧಿಕಾರಿಗಳನ್ನು ಸೇರ್ಪಡೆಗೊಳಿಸಿ ಸಮಗ್ರ ಸರ್ವೇ ನಡೆಸಬೇಕು’ ಎಂದು ಸೂಚಿಸಿದರು. `ಅಗತ್ಯವಿದ್ದರೆ ಈ ತ್ಯಾಜ್ಯ ಘಟಕವನ್ನು ಜನವಸತಿಯಿಲ್ಲದ ಜಾಗಕ್ಕೆ ಅಥವಾ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.
ಕಾರವಾರ ನಗರದ ಹೆದ್ದಾರಿ ಫ್ಲೈ ಓವರ್ ಕೆಳಗಿನ ಖಾಲಿ ಜಾಗದಲ್ಲಿ ಅನಧಿಕೃತವಾಗಿ ವಾಹನಗಳ ಪಾರ್ಕಿಂಗ್ ಮತ್ತಿತರ ಚಟುವಟಿಕೆ ನಡೆಯಲು ಅವಕಾಶ ನೀಡಿರುವ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಅನಧಿಕೃತ ಕೃತ್ಯಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ಬೇಜಾವಾಬ್ದಾರಿ ನಡವಳಿಕೆಯನ್ನು ಕುರಿತು ತಕ್ಷಣವೇ ಲಿಖಿತ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ನಿರ್ಲಕ್ಷದ ಬಗ್ಗೆ ಪ್ರಕರಣದ ಕುರಿತು ಪ್ರಕರಣ ದಾಖಲಿಸುವಂತೆ ತಿಳಿಸಿದ ಅವರು ಈ ಬಗ್ಗೆ ಸಮಗ್ರ ವರದಿಯನ್ನು ಪಡೆದು ಕೇಂದ್ರದ ಲೋಕಪಾಲ್ ಗಮನಕ್ಕೆ ತರುವುದಾಗಿ ತಿಳಿಸಿದರು. ಪರಿಶೀಲನೆ ವೇಳೆ ಪ್ಲೆöÊ ಓವರ್ ಕೆಳಗೆ ನರ್ಸರಿ ಗಿಡಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ವಿಚಾರಣೆ ನಡೆಸಿದರು. `ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಖಾಲಿ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮುಂದುವರಿಸಲಾಗುತ್ತಿದ್ದರೂ ಅಧಿಕಾರಿಗಳು ಕೇವಲ ನೋಟಿಸ್ ನೀಡುವುದು ಮತ್ತು ದಂಡ ಹಾಕಿ ಸುಮ್ಮನಾಗುವುದರಿಂದ ಇಂತಹ ಅಕ್ರಮಗಳು ನಿಲ್ಲುವುದಿಲ್ಲ’ ಎಂದರು. ಪ್ಲೆö ಓವರ್ ಕೆಳಗೆ ವಾಹನಗಳ ನಿಲ್ಲದಂತೆ ಸುತ್ತಲೂ ಗೇಟ್ಗಳನ್ನು ಅಳವಡಿಸುವಂತೆ ಮತ್ತು ತೋಟಗಾರಿಕಾ ಇಲಾಖೆ ಮೂಲಕ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಮಾಡುವಂತೆ ಸೂಚಿಸಿದರು.
ನಂತರ ಮಾತನಾಡಿದ ಅವರು `ರಾಜ್ಯದಲ್ಲಿ ಭ್ರಷ್ಠಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಸುಮಾರು ಶೇಕಡಾ 10 ರಿಂದ 15 ರಷ್ಟು ಮಾತ್ರ ಇದೆ. ದೂರುದಾರರು ಕಾಲಕ್ರಮೇಣ ಹಿಂಜರಿಯುವುದು, ಸಾಕ್ಷಿಗಳ ಕೊರತೆ ಹಾಗೂ ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಲೋಕಾಯುಕ್ತಕ್ಕೆ ಹೆಚ್ಚಿನ ಸ್ವಾಯತ್ತತೆ ಮತ್ತು ಅಧಿಕಾರ ನೀಡಲು ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದೆ. ರಾಜ್ಯಾದ್ಯಂತ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 300 ರಿಂದ 400 ಹುದ್ದೆಗಳು ಖಾಲಿ ಇವೆ. ಸಂಸ್ಥೆಯನ್ನು ಬಲಪಡಿಸಲು ಶೇಕಡಾ 50ರಷ್ಟು ನಿವೃತ್ತ ಸೇನಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ತಿಳಿಸಲಾಗಿದ್ದು, ಇದರಿಂದ ಸಂಸ್ಥೆಯ ಕಾರ್ಯವೈಖರಿ ಮತ್ತು ವೇಗ ಮತ್ತಷ್ಟು ಹೆಚ್ಚಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಲೋಕಾಯುಕ್ತಕ್ಕೆ ಸ್ವಂತ ಕಟ್ಟಡಗಳಿದ್ದು, ಇನ್ನು ಕೆಲವು ಕಡೆ ಸರ್ಕಾರಿ ಕಟ್ಟಡಗಳನ್ನು ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ನಿವೇಶನ ಮತ್ತು ಕಟ್ಟಡಗಳ ವ್ಯವಸ್ಥೆ ಒದಗಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಲೋಕಾಯುಕ್ತ ಸಂಸ್ಥೆಗೆ ಸರ್ಕಾರದಿಂದ ಎಲ್ಲಾ ರೀತಿಯ ಅನುದಾನ ಮತ್ತು ಸೌಲಭ್ಯಗಳು ದೊರೆಯುತ್ತಿವೆ’ ಎಂದರು.