ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಅನೇಕ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ!
Advertisement. Scroll to continue reading.
ಅಂಥಹುದರಲ್ಲಿ ಗೋಕರ್ಣದಲ್ಲಿ ದೋಸೆ ತಿನ್ನುವುದಕ್ಕಾಗಿಯೇ ಒಂದು ಹಬ್ಬ ನಡೆಯುತ್ತದೆ. ಅನೇಕ ವರ್ಷಗಳಿಂದ ಇಲ್ಲಿ `ದೋಸೆ ಕಂಬಳ’ವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಹಬ್ಬಕ್ಕೆ ಬಂದ ಎಲ್ಲಾ ಭಕ್ತರಿಗೂ ಅಲ್ಲಿನ ಬ್ರಾಹ್ಮಣ ಕುಟುಂಬದವರು ಅಷ್ಟೇ ಭಕ್ತಿಯಿಂದ ದೋಸೆ ಉಣಬಡಿಸುತ್ತಾರೆ. ಭಕ್ತರು ಎಷ್ಟೇ ದೋಸೆ ತಿಂದರೂ ಅದಕ್ಕೆ ದುಡ್ಡು ಕೊಡಬೇಕಾಗಿಲ್ಲ!
ಬಿಸಿ, ಬಿಸಿ ದೋಸೆ ಜೊತೆ ಚಟ್ನಿ ,ಬಾಜಿ, ಬೆಲ್ಲ ಸವಿ ಸವಿಯಲು ನೂರಾರು ಜನ ಭಟ್ಟರ ಮನೆಗೆ ಬರುತ್ತಾರೆ. ಬಂಧು-ಮಿತ್ರರೆಲ್ಲರೂ ಸೇರಿ ಖುಷಿಯಿಂದ ಹಬ್ಬ ಆಚರಿಸುತ್ತಾರೆ. ರಥಬೀದಿಯಲ್ಲಿರುವ ಬಾಲಕೃಷ್ಣ ಜಂಬೆ ಅವರ ಮನೆಯಲ್ಲಿ ಮೊನ್ನೆ ರಾತ್ರಿ ನಡೆದ ದೋಸೆ ಹಬ್ಬ ಅನೇಕರ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು, ಹೊಟ್ಟೆ ತುಂಬ ದೋಸೆ ತಿಂದ ಜನ ಹಬ್ಬಕ್ಕೆ ಕಾರಣಿಕರ್ತರಾದ ಕುಟುಂಬದವರನ್ನು ಮನಸಾರೆ ಹಾರೈಸಿದರು.
ಪ್ರತಿ ವರ್ಷವೂ ಗೋಕರ್ಣದಲ್ಲಿ ದೋಸೆ ಕಂಬಳ ನಡೆಯುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಮಹಾಬಲೇಶ್ವರ ಮಂದಿರದ ನಂದಿ ಮಂಟಪದಲ್ಲಿ ಕಾರ್ಯನಿರ್ವಹಿಸುವ ಉಪಾಧಿವಂತ ವೈದಿಕರ ಮನೆಯಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ದೇವಾಲಯದಲ್ಲಿ ರಂಗಪೂಜೆ – ಎಡೆ ನೇವೇದ್ಯ ಬಳಿಕ ಆತ್ಮಲಿಂಗಕ್ಕೆ ಸಮರ್ಪಿಸಿದ ನವಧಾನ್ಯಗಳನ್ನ ಸಂಗ್ರಹಿಸಿ ಅದನ್ನು ಅಕ್ಕಿಯ ಜೊತೆ ಬೆರೆಸಿ ದೋಸೆ ಸಿದ್ಧಪಡಿಸಲಾಗುತ್ತದೆ. ಆ ಭಾಗದ ಎಲ್ಲಾ ಸಮಾಜದ ಜನರ ಜೊತೆ ಬೇರೆ ಬೇರೆ ಪ್ರದೇಶದ ಜನರು ಪ್ರಸಾದ ರೂಪದಲ್ಲಿ ಸಿಗುವ ದೋಸೆ ಸ್ವೀಕರಿಸುತ್ತಾರೆ.
ದೋಸೆ ಕಂಬಳದ ಬಗ್ಗೆ ಅರಿತ ಅನೇಕರು ಇದಕ್ಕಾಗಿಯೇ ಬಿಡುವು ಮಾಡಿಕೊಂಡು ಬೇರೆ ಬೇರೆ ಊರುಗಳಿಂದ ಬರುತ್ತಾರೆ. ಊರಿನ ಜನರ ಜೊತೆ ಬೆರೆತು ಕುಶಲೋಪರಿ ವಿಚಾರಿಸುವ ಈ ಹಬ್ಬ ಬಾಂದವ್ಯ ವೃದ್ಧಿಗೂ ಸಹಕಾರ ನೀಡುತ್ತಿದೆ.