ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮೀನು ಚುಚ್ಚಿ ಸಾವನಪ್ಪಿದ ಅನಿಲ ಮಾಜಾಳಿಕರ್ ಅವರ ಕುಟುಂಬಕ್ಕೆ ಈವರೆಗೂ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ. ದುಡಿಯುವ ಯುವಕ ದುರ್ಘಟನೆಯಲ್ಲಿ ಕೊನೆಯಾದವನ ಕುಟುಂಬದವರ ಕಣ್ಣೀರು ಒರೆಸುವವರಿಲ್ಲ.
ಕಾರವಾರದ ಮಾಜಾಳಿ ದಾಂಡೇಭಾಗದ ಅಕ್ಷಯ ಅನಿಲ ಮಾಜಾಳಿಕರ್ (24) ಎಂಬಾತರು ಅಕ್ಟೋಬರ್ 14ರಂದು ಮೀನುಗಾರಿಕೆಗೆ ತೆರಳಿದಾಗ ಸಾವನಪ್ಪಿದ್ದರು. ಅವರ ಹೊಟ್ಟೆಗೆ ಮೊನಚಾದ ಕಾಂಡಿ ಮೀನು ಚುಚ್ಚಿದ್ದರಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಮನೆಯ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ತಂದೆ ಹಾಗೂ ಕುಟುಂಬಸ್ಥರು ಸದ್ಯ ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರದಿಂದಲೂ ಅವರಿಗೆ ಪರಿಹಾರ ಸಿಕ್ಕಿಲ್ಲ.
`ಮೀನುಗಾರಿಕಾ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಮೃತ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ದುರಾದೃಷ್ಟಕರ ಸಂಗತಿ’ ಎಂದು ಮೀನುಗಾರರು ಅಳಲು ತೋಡಿಕೊಂಡರು. `ವಾರದ ಹಿಂದಷ್ಟೇ ಸಚಿವರು ಕಾರವಾರಕ್ಕೆ ಬಂದು ಹೋಗಿದ್ದರೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿಲ್ಲ. ಗಲಭೆ ಅಥವಾ ಇತರೆ ಅಹಿತಕರ ಘಟನೆಗಳು ನಡೆದಾಗ ವಾರದೊಳಗೆ ಪರಿಹಾರ ಘೋಷಿಸುವ ಸರ್ಕಾರ ಅಮಾಯಕ ಮೀನುಗಾರನ ದುರ್ಮರಣದ ವಿಷಯದಲ್ಲಿ ಕಾಳಜಿವಹಿಸಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.