ಅರಬ್ಬಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ವಿದೇಶಿ ಮಹಿಳೆಯನ್ನು ಗೋಕರ್ಣದ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಪಾಯದಿಂದ ಪಾರಾದ ಮಹಿಳೆ ಜೀವ ರಕ್ಷಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕಜಕಿಸ್ತಾನ ಐದಾಲಿ (25) ಅವರು ತಮ್ಮ ಪತಿ ಜೊತೆ ಗೋಕರ್ಣಕ್ಕೆ ಬಂದಿದ್ದರು. ಸೋಮವಾರ ಅವರು ಕುಡ್ಲೆ ಕಡಲತೀರಕ್ಕೆ ಹೋಗಿದ್ದರು. ದಂಪತಿ ಅಲ್ಲಿನ ನೀರಿಗೆ ಇಳಿದು ಆಡವಾಡುವಾಗ ಐದಾಲಿ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿದರು. ಪತ್ನಿ ಅಪಾಯಕ್ಕೆ ಸಿಲುಕಿರುವುದನ್ನು ನೋಡಿ ಅವರ ಪತಿ ಬೊಬ್ಬೆ ಹೊಡೆದರು.
ಮಹಿಳೆ ಅಪಾಯದಲ್ಲಿರುವುದನ್ನು ಅರಿತ ಜೀವ ರಕ್ಷಕ ಸಿಬ್ಬಂದಿ ಮಂಜುನಾಥ್ ಹರಿಕಂತ್ರ ,ಗಿರೀಶ್ ಗೌಡ, ನಾಗೇಂದ್ರ ಕುರ್ಲೆ ತಕ್ಷಣ ಸಮುದ್ರಕ್ಕೆ ಹಾರಿದರು. ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಲಕ್ಷ್ಮಿಕಾಂತ್ ಹರಿಕಂತ್ರ ಅವರು ಜಸ್ಕಿ ಮೂಲಕ ತೆರಳಿ ಅವರನ್ನು ನೀರಿನಿಂದ ಮೇಲೆತ್ತಿದರು. ಪ್ರವಾಸಿ ಮಿತ್ರ ಶೇಖರ್ ಹರಿಕಂತ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದರು.