ಅಂಕೋಲಾ ಸತ್ಯಾಗ್ರಹ ಭವನದಲ್ಲಿ ಸಭೆ ನಡೆಸಿರುವ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿದ್ದು, ಸತ್ಯಾಗ್ರಹ ಸ್ಮಾರಕ ಭವನಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. `ಸ್ಮಾರಕ ಭವನಕ್ಕೆ ಸಂಬoಧಿಸಿದ ವಿವಿಧ ಖಾತೆಗಳಲ್ಲಿ 25 ಲಕ್ಷಕ್ಕೂ ಅಧಇಕ ಹಣವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ’ ಎಂದವರು ಸೂಚನೆ ನೀಡಿದ್ದಾರೆ.
ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಐತಿಹಾಸಿಕ ಮಹತ್ವ ಹೊಂದಿರುವ ಅಂಕೋಲಾದಲ್ಲಿರುವ ಈ ಸತ್ಯಾಗ್ರಹ ಸ್ಮಾರಕ ಭವನವನ್ನು, ಉಪ್ಪಿನ ಸತ್ಯಾಗ್ರಹ ಹಾಗೂ ಕರ ನಿರಾಕರಣೆ ಚಳುವಳಿ ಘಟನೆಯ 50 ವರ್ಷದ ಸಮಾರಂಭದಲ್ಲಿ ನಿರ್ಮಿಸಲಾಗಿದೆ. ಆದರೆ, ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಧ್ವನಿ ಹಾಗೂ ಬೆಳಗಿನ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ಪಾಳು ಬಿದ್ದಿದ್ದು, ಅದನ್ನು ನೋಡುವವರಿಲ್ಲ. ಲೈಟ್ ಉರಿಯುವುದಿಲ್ಲ. ಫ್ಯಾನ್ ತಿರುಗುವುದಿಲ್ಲ. ಗ್ರಂಥಾಲಯ ದುರಸ್ತಿ ಕೆಲಸ ನಡೆದಿಲ್ಲ. ಕಟ್ಟಡಕ್ಕೆ ಬಣ್ಣ ಬಡಿದಿಲ್ಲ. ಹೀಗಾಗಿ ಈ ಎಲ್ಲಾ ಕೆಲಸವನ್ನು ಸರಿಯಾಗಿ ಮಾಡಿ ಎಂದು ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ.
`ಲಭ್ಯವಿರುವ ಅನುದಾನ ಬಳಸಿಕೊಂಡು ಮಾಡಬಹುದಾದ ಕೆಲಸದ ಬಗ್ಗೆ ಲೋಕೋಪಯೋಗಿ ಇಲಾಖೆ ಅಂದಾಜು ಪಟ್ಟಿ ಸಲ್ಲಿಸಬೇಕು. ಅಂದಾಜು ಮೊತ್ತಕ್ಕಿಂತ ಅಧಿಕ ಮೊತ್ತವಾದರೆ ಇತರೆ ಇಲಾಖೆಗಳ ಮೂಲಕ ನೆರವು ಒದಗಿಸಲು ಕ್ರಮ ಜರುಗಿಸಲಾಗುತ್ತದೆ’ ಎಂದವರು ಹೇಳಿದರು. `ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗ್ರಂಥಾಲಯ ಮತ್ತು ಉದ್ಯಾನವನವನ್ನು ತಾಲೂಕು ಆಡಳಿತ ಮತ್ತು ಪುರಸಭೆಯು ಪರಸ್ಪರ ಎಂಓಯು ಮಾಡಿಕೊಳ್ಳುವ ಮೂಲಕ ಪುರಸಭೆಯಿಂದ ನಿರ್ವಹಣೆ ಮಾಡಬೇಕು. ಉದ್ಯಾನವನದಲ್ಲಿನ ಸ್ವಚ್ಚತೆ, ದೀಪಗಳ ದುರಸ್ಥಿ ಕಾರ್ಯ ನಡೆಸಬೇಕು’ ಎಂದು ಸೂಚಿಸಿದರು. `ಸತ್ಯಾಗ್ರಹ ಸ್ಮಾರಕ ಭವನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಬೇಕು. ಹೆಚ್ಚಿನ ಹಣ ಸಿಕ್ಕರೆ ಅದರ ಪ್ರಕಾರ ಯೋಜನೆ ಸಿದ್ಧಪಡಿಸಬೇಕು’ ಎಂದರು.
`ಈ ಭವನವನ್ನು ಅಭಿವೃದ್ಧಿಗೊಳಿಸಲು ಆರ್ಥಿಕ ನೆರವು ನೀಡಲು ಬಯಸುವ ಉದ್ದಿಮೆಗಳು ಮತ್ತು ಉದ್ದಿಮೆದಾರರು ಸಿ.ಎಸ್.ಆರ್. ದೇಣಿಗೆ ನೀಡಲು ಅಂಕೋಲಾ ತಹಸೀಲ್ದಾರ್ ಅವರನ್ನು ಸಂಪರ್ಕಿಸಿ’ ಎಂದು ಕರೆ ನೀಡಿದರು. `ಸತ್ಯಾಗ್ರಹ ಸ್ಮಾರಕ ಭವನವನ್ನು ರಾಷ್ಟಿಯ ಸ್ಮಾರಕದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು, ಇಲ್ಲಿನ ಎಲ್ಲಾ ಕಟ್ಟಡಗಳು ಅರ್ಥಪೂರ್ಣವಾಗಿ ಅಭಿವೃದ್ಧಿಪಡಿಸಬೇಕು, ಜಿಲ್ಲೆಯ ಎಲ್ಲಾ ಸ್ವತಂತ್ರ ಹೋರಾಟಗಾರರ ಹೆಸರುಗಳನ್ನು ಇಲ್ಲಿನ ಆವರಣದಲ್ಲಿ ಅಳವಡಿಸಬೇಕು, ಮಹಾತ್ಮ ಗಾಂಧೀಜಿ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕು. ಸ್ವಚ್ಛತೆ ಕಾಪಾಡಬೇಕು, ಖಾಯಂ ಸಿಬ್ಬಂದಿಗಳನ್ನು ನೇಮಿಸಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಳಪ್ಪ ನಾಯಕ್, ಶಾಂತಾರಾಮ ನಾಯಕ್, ರಘುನಂದನ ನಾಯಕ್, ಉಮೇಶ್ ನಾಯಕ್, ರಮೇಶ್ ಮತ್ತಿತರರು ಮನವಿ ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ಚಿಕ್ಕಪ್ಪ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಇದ್ದರು.