ಬೆಂಗಳೂರಿನಿoದ ಹೊನ್ನಾವರಕ್ಕೆ ಬರುವ ಸುಗಮ ಬಸ್ಸಿನಲ್ಲಿ ಕಳ್ಳರ ಕಾಟ ಜೋರಾಗಿದೆ. ಈ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಚಿನ್ನದ ವ್ಯಾಪಾರಿ ನಾಗರಾಜ ಪಾಲೇಕರ್ ಅವರು 6.40 ಲಕ್ಷ ರೂ ಮೌಲ್ಯದ ಆಭರಣ ಕಳೆದುಕೊಂಡಿದ್ದಾರೆ.
ಹೊನ್ನಾವರದ ಕಾಸರಕೋಡು ಟೊಂಕಾದ ನಾಗರಾಜ ಶಿವಾನಂದ ಪಾಲೇಕರ್ ಅವರು ಸದ್ಯ ಬೆಂಗಳೂರು ನಿವಾಸಿ. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಅವರು ನವೆಂಬರ್ 8ರಂದು ಹೊನ್ನಾವರಕ್ಕೆ ಬರಲು ನಿರ್ಧರಿಸಿದ್ದರು. ಇದಕ್ಕಾಗಿ ಸುಗಮ ಬಸ್ಸಿನಲ್ಲಿ ಅವರು ಸಂಚಾರ ಶುರು ಮಾಡಿದ್ದರು. ಆ ದಿನ ರಾತ್ರಿ ಅವರ ಬಳಿಯಿದ್ದ ಚಿನ್ನದ ಆಭರಣಗಳನ್ನು ಬಸ್ಸಿನಲ್ಲಿಯೇ ಕಳ್ಳರು ಅಪಹರಿಸಿದರು.
ನಾಗರಾಜ ಪಾಲೇಕರ್ ಅವರು ತಮ್ಮ ಪ್ರಯಾಣದ ಜೊತೆ ಚಿಕ್ಕ ಪರ್ಸ ಇರಿಸಿಕೊಂಡಿದ್ದರು. ಅದರಲ್ಲಿ ಹಳೆಯ ಬಂಗಾರದ ಆಭರಣಗಳಿದ್ದವು. ಕರಿಮಣಿ ಸರ
ಹಾರ, ಬಳೆ, ಕಿವಿಯೋಲೆ, ಉಂಗುರಗಳನ್ನು ನೋಡಿದ್ದ ಕಳ್ಳರು ಆ ಪರ್ಸನ್ನು ಎಗರಿಸಿದರು. ಇದರಿಂದ ನಾಗರಾಜ ಪಾಲೇಕರ್ ಅವರು 6.40 ಲಕ್ಷ ರೂ ನಷ್ಟ ಅನುಭವಿಸಿದರು. ಕಳ್ಳತನದ ಬಗ್ಗೆ ಅವರು ಹೊನ್ನಾವರ ಪೊಲೀಸರಿಗೆ ದೂರಿದ್ದು, ಅವರು ತನಿಖೆ ಶುರು ಮಾಡಿದ್ದಾರೆ.