ಬಡವರಿಗೆ ಶಾಶ್ವತ ಸೂರು ಕಲ್ಪಿಸುವುದಕ್ಕಾಗಿ ಶಿರಸಿ ಅಡಗಿ ರಸ್ತೆಯಲ್ಲಿ 3.60 ಕೋಟಿ ರೂ ವೆಚ್ಚದಲ್ಲಿ ಮನೆ ಕಟ್ಟಲಾಗುತ್ತಿದೆ. ಆದರೆ, ಈ ಕಟ್ಟಡ ಕಳಪೆ ಎಂಬ ಅನುಮಾನ ಅಲ್ಲಿನವರನ್ನು ಕಾಡುತ್ತಿದೆ.
ಅಡಗಿ ರಸ್ತೆಯ ಲೀಡಕರ್ ಕಾಲೋನಿಯಲ್ಲಿ ಸರ್ಕಾರದಿಂದ ಮನೆ ನಿರ್ಮಿಸುವ ಕೆಲಸ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟಮೆಂಟ್ ಮಾದರಿಯಲ್ಲಿ ಇಲ್ಲಿ ಮನೆ ನಿರ್ಮಾಣ ನಡೆಯುತ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ಇಲ್ಲಿ ಯಾವುದೇ ಕೆಲಸಗಾರರು ಬಂದಿಲ್ಲ. ಹೀಗಾಗಿ ಮನೆಯ ಕಿಟಕಿ, ಬಾಗಿಲು ಕೂರಿಸುವ ಕಾರ್ಯ ನಡೆದಿಲ್ಲ. ಜೊತೆಗೆ ಬಣ್ಣ ಬಡಿಯಲು ಸಹ ಗುತ್ತಿಗೆದಾರ ಆಸಕ್ತಿವಹಿಸಿಲ್ಲ.
ಚರ್ಮಗಾರಿಕೆ ಮಾಡುವ ಜನರಿಗಾಗಿ 3.60 ಕೋಟಿ ರೂ ವೆಚ್ಚದಲ್ಲಿ 60 ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಸರ್ಕಾರ ಪ್ರತಿ ಮನೆ ನಿರ್ಮಾಣಕ್ಕೆ 6 ಲಕ್ಷ ರೂ ಅನುದಾನ ನೀಡುತ್ತಿದೆ. ಆ ಹಣ ಬಳಸಿ ಮೊದಲು ಎಲ್ಲವೂ ವೇಗವಾಗಿ ನಡೆಯಿತು. ಕ್ರಮೇಣ ಕೆಲಸ ನಿಧಾನವಾಗಿದ್ದು, ಸದ್ಯ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಅಲ್ಲಿನವರು ಅನುಮಾನವ್ಯಕ್ತಪಡಿಸಿದ್ದಾರೆ.
ಐದು ಅಪಾರ್ಟಮೆಂಟ್ ಮಾದರಿಯಲ್ಲಿ ಇಲ್ಲಿ ಕಟ್ಟಡ ನಿರ್ಮಾಣ ನಡೆದಿದೆ. ಚರ್ಮಗಾರಿಕೆ ಮಾಡುವವರಿಗೆ ಮನೆ ಜೊತೆ ಅಲ್ಲಿಯೇ ವರ್ಕಶಾಪ್ ಅನುಕೂಲಕರ ವಾತಾವರಣವನ್ನು ನಿರ್ಮಿಸಲಾಗಿದೆ. ಈ ಮನೆಪಡೆಯಲು ಫಲಾನುಭವಿ 95 ಸಾವಿರ ರೂ ಪಾವತಿಸಬೇಕಿದ್ದು, ಅದನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶವಿಲ್ಲದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
`ಅತ್ಯಂತ ಇಕ್ಕಟಾದ ಪ್ರದೇಶದಲ್ಲಿ ಮನೆ ನಿರ್ಮಾಣ ನಡೆದಿದೆ. ಸಿಮೆಂಟ್ ರಸ್ತೆ ಸಹ ಕಳಪೆಯಾಗಿದ್ದು, ಎಲ್ಲಾ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಂತರವೇ ಅದನ್ನು ಹಂಚಿಕೆ ಮಾಡಬೇಕು. ಹಲವು ದಶಕದಿಂದ ಇಲ್ಲಿ 24 ಮನೆ ಇಲ್ಲಿದ್ದು, ಅವರ ಹೆಸರಿಗೆ ಭೂಮಿ ದಾಖಲೆ ಆಗಬೇಕು’ ಎಂದು ಅಲ್ಲಿನ ಮುಕೇಶ ಅವರು ಆಗ್ರಹಿಸಿದರು.