ಕಾರವಾರದ ಬಿಣಗಾದಲ್ಲಿರುವ ಗ್ರಾಸೀಂ ಇಂಡಸ್ಟ್ರಿ’ನಲ್ಲಿ ದುಡಿದು ನಿವೃತ್ತರಾದ ನೌಕರರಿಗೆ ನಿಯಮಾನುಸಾರ ಸೌಲಭ್ಯ ಒದಗಿಸುತ್ತಿಲ್ಲ. ಹೀಗಾಗಿ ಅನ್ಯಾಯಕ್ಕೆ ಒಳಗಾದ ನಿವೃತ್ತ ನೌಕರರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
`ಕoಪನಿಯೂ ಎರಡು ವರ್ಷಗಳಿಂದ ಹಿಂಬಾಕಿ ವೇತನ ನೀಡಿಲ್ಲ. ನ್ಯಾಯಾಲಯದ ಆದೇಶವಿದ್ದರೂ ಅದನ್ನು ಪಾಲಿಸುತ್ತಿಲ್ಲ’ ಎಂದು ಗ್ರಾಸೀಂ ನಿವೃತ್ತ ನೌಕರ ಯುಗಂಧರ ಆಲೂರು ದೂರಿದರು. `ನ್ಯಾಯಾಲಯವು ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಿ ಆದೇಶ ನೀಡಿತ್ತು. ಅದರ ಪ್ರಕಾರ 2018ರಿಂದ 2023 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಕಂಪನಿಯು ಎರಡು ವರ್ಷಗಳ ಹಿಂಬಾಕಿ ವೇತನವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು’ ಎಂದವರು ವಿವರಿಸಿದರು.
`ಆದರೆ, ಕಂಪನಿಯ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಬಾಕಿ ವೇತನ ಪಾವತಿಗೆ ನಿರಾಕರಿಸುತ್ತಿದ್ದಾರೆ. ಹಿಂಬಾಕಿ ನೀಡಲು ಕಂಪನಿ ಕಾನೂನುಬಾಹಿರ ಷರತ್ತು ವಿಧಿಸುತ್ತಿದೆ’ ಎಂದು ದೂರಿದರು. `ಫೈನಲ್ ಸೆಟಲ್ಮೆಂಟ್ ಎಂದು ಬಾಂಡ್ ಮೇಲೆ ಸಹಿ ಮಾಡಿದ ನಂತರ ವೇತನ ನೀಡುವುದಾಗಿ ಕಂಪನಿ ಹೇಳಿದೆ. ಆದರೆ ಈ ಷರತ್ತು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ’ ಎಂದರು.
`ಅ 30ರಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗಕ್ಕೆ ಮನವಿ ನೀಡಲು ತೆರಳಿದಾಗ ಅದನ್ನು ಸ್ವೀಕರಿಸಿಲ್ಲ. ಜೊತೆಗೆ ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಲೂ ಅವಕಾಶ ನೀಡಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕಾರ್ಮಿಕ ಇಲಾಖೆ ಹಾಗೂ ಉಪ ಕಾರ್ಮಿಕ ಆಯುಕ್ತರು ಕೂಡಲೇ ಮಧ್ಯಸ್ಥಿಕೆ ವಹಿಸಬೇಕು. ಕಂಪನಿಯು ನ್ಯಾಯಾಲಯದ ತೀರ್ಪನ್ನು ಗೌರವಿಸಿ, ಯಾವುದೇ ಷರತ್ತುಗಳಿಲ್ಲದೆ ಹಿಂಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ವನದೇವ ಹರಿಕಂತ್ರ, ಗೋಪಾಲಕೃಷ್ಣ ನಾಯ್ಕ, ಲಕ್ಷೀಕಾಂತ ದುರ್ಗೇಕರ, ಕಿರಣ ಗಾಂವ್ಕರ ಆಗ್ರಹಿಸಿದರು.