ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಹಣಗಳಿಸಲು ಸಾಧ್ಯ ಎಂಬ ಸಂದೇಶ ನಂಬಿದ ಕಾರವಾರದ ಪಂಕಜ್ ನಾಯ್ಕ ಅವರು 59 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. `ಅಪರಿಚಿತರನ್ನು ನಂಬಬೇಡಿ. ಆನ್‌ಲೈನ್ ವಂಚನೆಗೆ ಬಲಿಯಾಗಬೇಡಿ’ ಎಂದು ಪೊಲೀಸರು ಸಾವಿರ ಸಲ ಹೇಳಿದರೂ ಮೋಸ ಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ!
ಕಾರವಾರದ ಸದಾಶಿವಗಡದಲ್ಲಿ ಪಂಕಜ್ ರೋಹಿದಾಸ ನಾಯ್ಕ ಅವರು ಹೊಟೇಲ್ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 21ರಂದು ಅವರು ಇನಸ್ಟಾಗ್ರಾಮಿನಲ್ಲಿ ಟ್ರೆಡಿಂಗ್ ಕಂಪನಿಯ ಸಂದೇಶ ನೋಡಿದರು. ಅದರ ಮೂಲಕ ವಾಟ್ಸಪ್ ಗುಂಪು ಸೇರಿದರು. ಗ್ರೂಪ್ ಅಡ್ಮಿನ್ ಆರೋಹಿ ನಂಬೋದರಿ ಅವರು ಹೇಳಿದ ಮಾತು ಆಲಿಸಿದರು. ಅವರು ಹೇಳಿದಂತೆ ಮತ್ತೊಂದು ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಹಣ ಹೂಡಿಕೆ ಶುರು ಮಾಡಿದರು.
ಸೆಪ್ಟೆಂಬರ್ 26ರಿಂದ ಡಿಸೆಂಬರ್ 6ರವರೆಗೂ ಹಂತಹoತವಾಗಿ 59.50 ಲಕ್ಷ ರೂ ಹೂಡಿಕೆ ಮಾಡಿದರು. ಇದಕ್ಕೆ ಪ್ರತಿಯಾಗಿ 3 ಕೋಟಿ ರೂ ಲಾಭಗಳಿಸಿರುವುದಾಗಿ ಪಂಕಜ ನಾಯ್ಕ ಅವರಿಗೆ ಮಾಹಿತಿ ಬಂದಿತು. ಆದರೆ, ಆ ಲಾಭದ ಹಣ ಹಿಂಪಡೆಯಲು ಮಾತ್ರ ಸಾಧ್ಯವಾಗಲಿಲ್ಲ. ಆಗ, ಆ ಮಹಿಳೆಗೆ ಪಂಕಜ ನಾಯ್ಕ ಅವರು ಫೋನ್ ಮಾಡಿದರು. ಇನ್ನಷ್ಟು `ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭದ ಹಣ ಸಿಗಲಿದೆ’ ಎಂದು ಮಹಿಳೆ ಹೇಳಿದ್ದು, ಮೋಸ ಹೋಗಿರುವುದನ್ನು ಅರಿತ ಪಂಕಜ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.