ರಾಜ್ಯದ ಪ್ರಸಿದ್ಧ ಉಳವಿ ಜಾತ್ರೆಗೆ ಬರುವ ಜನರಿಗೆ ಸಂಪರ್ಕ ರಸ್ತೆ ಹದಗೆಟ್ಟಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ `ರಸ್ತೆ ಸರಿ ಆಗದೇ ಇದ್ದರೆ ಜಾತ್ರೆಗೆ ಬರುವುದಿಲ್ಲ’ ಎಂದು ಉತ್ತರ ಕರ್ನಾಟಕ ಭಾಗದ ಭಕ್ತರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಸಭೆ ಸಹಾಯಕ ಕಮಿಷನರ್ ಶ್ರವಣಕುಮಾರ್ ಅಧ್ಯಕ್ಷತೆಯಲ್ಲಿ ಉಳವಿಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದ್ದು, ರಸ್ತೆ ಅವ್ಯವಸ್ಥೆಗಳ ಬಗ್ಗೆ ಭಕ್ತರು ಅಸಮಧಾನವ್ಯಕ್ತಪಡಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಕ್ಕಾಗಿಯೇ ಉತ್ತರ ಕರ್ನಾಟಕ ಭಾಗದಿಂದ ಬಂದಿದ್ದ ಭಕ್ತರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದು, ಇಡೀ ಸಭೆ ಗದ್ದಲದಿಂದ ಕೂಡಿತ್ತು.
`ಫೋಟೋಲಿ-ಗುಂದ-ಉಳವಿ ರಸ್ತೆ, ಜೋಯಿಡಾ-ಕುಂಬಾರವಾಡಾ-ಉಳವಿ ರಸ್ತೆ, ದಾಂಡೇಲಿ-ಹಳಿಯಾಳ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹೊಂಡಮಯವಾಗಿದೆ. ಇಲ್ಲಿ ಚಕ್ಕಡಿ ಗಾಡಿಯೂ ಓಡುವುದಿಲ್ಲ. ಟ್ರ‍್ಯಾಕ್ಟರ್ ಸಹ ಸಂಚರಿಸುವುದಿಲ್ಲ’ ಎಂದು ತಮ್ಮ ಆಕ್ರೋಶಹೊರಹಾಕಿದರು. `ರಸ್ತೆ ಸರಿಪಡಿಸದಿದ್ದರೆ ಈ ಬಾರಿ ಜಾತ್ರೆಗೆ ಬರುವುದಿಲ್ಲ’ ಎಂದು ಎಚ್ಚರಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಬಸವರಾಜ ಎಸ್ ಅವರು `ಡಿಸೆಂಬರ್ 15ರೊಳಗೆ ರಸ್ತೆ ಸರಿಪಡಿಸುವೆ’ ಎಂಬ ಭರವಸೆ ನೀಡಿದರು. ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೋಕಾಶಿ ಅವರು ಭಕ್ತರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಸ್ವಚ್ಛತೆಗಾಗಿ ಹೆಚ್ಚಿನ ಜನರನ್ನು ನೇಮಿಸಿಕೊಳ್ಳುವಂತೆ ಸಭೆಯಲ್ಲಿ ಸೂಚನೆ ಬಂದಿತು.
ಡಿವೈಎಸ್ಪಿ ಶಿವಾನಂದ ಎಂ ಅವರು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. `ಅಪಘಾತ ತಪ್ಪಿಸಲು ವಾಹನಗಳು ಮತ್ತು ಚಕ್ಕಡಿಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಹಾಕಬೇಕು’ ಎಂದವರು ಸೂಚಿಸಿದರು. ವಿಪ ಸದಸ್ಯ ಗಣಪತಿ ಉಳ್ವೇಕರ್, ತಹಶೀಲ್ದಾರ್ ಮಂಜುನಾಥ ಮೊನ್ನೋಳಿ ಇನ್ನಿತರರು ಸಭೆಯಲ್ಲಿದ್ದರು.