ಶಿರಸಿಯ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಸರಾಯಿ ಸೇವಿಸಿ ಸೇವೆ ಸಲ್ಲಿಸುವಾಗ ಶಾಸಕರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಭೀಮಣ್ಣ ನಾಯ್ಕ ಅವರು ತಾತ್ಕಾಲಿಕವಾಗಿ ಕ್ಯಾಂಟೀನ್ ಬಾಗಿಲು ಹಾಕಿಸಿದ್ದಾರೆ.
ಶಿರಸಿಯ ಇಂದಿರಾ ಕ್ಯಾಂಟೀನ್ ಮೊದಲಿನಿಂದಲೂ ಅವ್ಯವಸ್ಥೆಯಿಂದ ಕೂಡಿದ್ದು, ಅದನ್ನು ಸರಿಪಡಿಸಲು ಅಧಿಕಾರಿಗಳಿಂದಲೂ ಸಾಧ್ಯವಾಗಿಲ್ಲ. ಕ್ಯಾಂಟೀನಿನಲ್ಲಿ ಕಳಪೆ ಗುಣಮಟ್ಟದ ಆಹಾರ ಕೊಡಲಾಗುತ್ತಿದೆ ಎಂಬ ದೂರಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಸರ್ಕಾರ ಸೂಚಿಸಿದ ಪ್ರಕಾರ ಅಲ್ಲಿ ಊಟ-ತಿಂಡಿ ಕೊಡಲಾಗುತ್ತಿಲ್ಲ. ಅಗತ್ಯ ಸಾಮಗ್ರಿಗಳು ಸಹ ಸರಬರಾಜು ಆಗುತ್ತಿಲ್ಲ.
ಈ ನಡುವೆ ಸಾರ್ವಜನಿಕರೊಬ್ಬರು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು, ಭಾನುವಾರ ಭೀಮಣ್ಣ ನಾಯ್ಕ ಅವರು ಅಲ್ಲಿ ದಿಢೀರ್ ಭೇಟಿ ನೀಡಿದರು. ಅಲ್ಲಿ ತಿಂಡಿ ವಿತರಿಸುವ ವ್ಯಕ್ತಿ ಮದ್ಯ ಸೇವನೆ ಮಾಡಿರುವುದನ್ನು ಅವರು ಪತ್ತೆ ಮಾಡಿದರು. ಆ ಸಿಬ್ಬಂದಿ ಜೊತೆ ಅಲ್ಲಿದ್ದ ಇನ್ನಿತರರನ್ನು ಶಾಸಕರು ತರಾಠೆಗೆ ತೆಗೆದುಕೊಂಡರು. ಬಳಿಕ ಪೊಲೀಸರನ್ನು ಕರೆಯಿಸಿ, ಆ ಸಿಬ್ಬಂದಿಯ ವೈದ್ಯಕೀಯ ತಪಾಸಣೆಗೆ ಸೂಚಿಸಿದರು. ಗುತ್ತಿಗೆದಾರರಿಗೆ ಸಹ ಫೋನ್ ಮಾಡಿ ಝಾಡಿಸಿದರು.
ಅಲ್ಲಿದ್ದ ಜನರು ಶಾಸಕರ ಬಳಿ ಸಾಕಷ್ಟು ಸಮಸ್ಯೆ ಹೇಳಿದರು. `ಇಡ್ಲಿ ಮಾಡದೇ ಎಷ್ಟು ದಿನ ಆಗಿದೆ?’ ಎಂದು ಭೀಮಣ್ಣ ನಾಯ್ಕ ಅವರು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದರು. `ಹಸಿದ ಹೊಟ್ಟೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಸಿಗಲಿ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್ ಶುರು ಮಾಡಿದೆ. ಆದರೆ, ಇಲ್ಲಿ ಆ ಸೇವೆ ಸರಿಯಾಗಿಲ್ಲ’ ಎಂದು ಭೀಮಣ್ಣ ನಾಯ್ಕ ಅಸಮಧಾನವ್ಯಕ್ತಪಡಿಸಿದರು. `2 ತಿಂಗಳ ಹಿಂದೆ ಸರಿಯಾಗಿತ್ತು. ಆದರೆ, ಇದೀಗ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ’ ಎಂದು ಜನ ದೂರಿದರು.
`ನಗರಸಭೆ ಸದಸ್ಯರಿಗೂ ಕ್ಯಾಂಟೀನ್ ಸಿಬ್ಬಂದಿ ಗೌರವ ಕೊಡುವುದಿಲ್ಲ. ಅಧಿಕಾರಿಗಳ ಮಾತು ಆಲಿಸುವುದಿಲ್ಲ’ ಎಂದು ನಗರಸಭೆ ಪ್ರತಿನಿಧಿಗಳು ದೂರಿದರು. `ಸದ್ಯ ಕ್ಯಾಂಟೀನ್ ಬಂದ್ ಮಾಡಿ. ಎಲ್ಲವನ್ನು ಸರಿಪಡಿಸಿದ ನಂತರವೇ ಶುರು ಮಾಡಿ’ ಎಂದು ಭೀಮಣ್ಣ ನಾಯ್ಕ ಅವರು ತಾಕೀತು ಮಾಡಿದರು.