ಮುಂಡಗೋಡಿನ ಮೂವರು ಮಹಿಳೆಯರು ಸೇರಿ ಭತ್ತದ ಗದ್ದೆಗೆ ನುಗ್ಗಿದ್ದು, ಅಲ್ಲಿದ್ದ ಫಸಲು ಕದ್ದಿದ್ದಾರೆ. ಇದನ್ನು ಅರಿತ ಗದ್ದೆಯ ಮಾಲಕಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.
ಗದಗದ ಚನ್ನಮ್ಮ ಮಡಿವಾಳ ಅವರು ಮುಂಡಗೋಡಿನಲ್ಲಿ ಭೂಮಿ ಹೊಂದಿದ್ದರು. ಮುಂಡಗೋಡಿನ ಸಾಲಗಾಂವಿನಲ್ಲಿ ಅವರು ಕೃಷಿ ಮಾಡಿದ್ದರು. ಅಲ್ಲಿನ 4 ಎಕರೆ ಕ್ಷೇತ್ರದಲ್ಲಿ ಚನ್ನಮ್ಮ ಅವರು ಸಮೃದ್ಧವಾಗಿ ಭತ್ತ ಬೆಳೆದಿದ್ದರು.ಕ್ಷೇತ್ರದ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದರು. ಅಲ್ಲಿ ಉತ್ತಮ ಫಸಲು ಬಂದಿದ್ದು, ಇದನ್ನು ಸಹಿಸದ ಮೂವರು ಆ ಫಸಲು ಕೊಯ್ದರು.
ಮುಂಡಗೋಡ ಸಾಲಗಾಂವಿನ ನೀಲವ್ವ ಪಕ್ಕೀರಸ್ವಾಮಿ ಹರಿಜನ ಅವರ ಜೊತೆ ಕುಸುಮಾ ಫಕ್ಕೀರಸ್ವಾಮಿ ಹರಿಜನ, ರೇಣುಕಾ ನಾಗಪ್ಪ ಹರಿಜನ ಅವರು ಆ ಭತ್ತ ಕಟಾವು ಮಾಡಿದರು. ಅದಾದ ನಂತರ ಮಾಲತೇಶ ತೊಂಡೂರು ಅವರ ಟಾಕ್ಟರ್ ಮೇಲೆ ಅದನ್ನು ಸಾಗಾಟ ಮಾಡಿದರು. 120 ಚೀಲ ಭತ್ತದ ಜೊತೆ 160 ಪೆಂಡಿ ಹುಲ್ಲುಗಳನ್ನು ಕದ್ದ ಬಗ್ಗೆ ಚನ್ನಮ್ಮ ಮಡಿವಾಳ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದರು.