ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಒಳ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ ಯೋಧರೊಬ್ಬರ ಮೇಲೆ ಕಬ್ಬಿಣದ ಗೇಟ್ ತುಂಡಾಗಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ
ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ ಭೀಮರಾವ್ ಜಗದಾಲೆ (48) ಮೃತಪಟ್ಟ ಸಿಐಎಸ್‌ಎಫ್ ಸಿಬ್ಬಂದಿ. ಶನಿವಾರ ರಾತ್ರಿ ಅವರು ಅಣು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾವಲು ಕಾಯುತ್ತಿದ್ದರು. ಆ ವೇಳೆ ಭಾರವಾದ ಗೇಟ್ ಆಕಸ್ಮಿಕವಾಗಿ ಕುಸಿದು ಬಿದ್ದಿತು. ಅದು ಶೇಖರ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮ ಅವರು ಅಲ್ಲಿಯೇ ಕುಸಿದು ಬಿದ್ದರು.
ಶೇಖರ ಅವರನ್ನು ಸಹೋದ್ಯೋಗಿಗಳು ತಕ್ಷಣ ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೈಗಾದ ಕೆಜಿಎಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದರು.
ಕಬ್ಬಿಣದ ಗೇಟ್ ಕುಸಿತದ ನಿಖರ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.