`ಕಾರವಾರದಿಂದ ಕೈಗಾವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆ ಕಾಮಗಾರಿಯನ್ನು ಕೈಗಾ ಅಣು ವಿದ್ಯುತ್ ಘಟಕಕ್ಕೆವಹಿಸಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಜಿಲ್ಲಾಧಿಕಾರಿ, ಶಾಸಕ-ಸಚಿವರನ್ನು ಸೇರಿ ಅನೇಕರಿಗೆ ಪತ್ರ ಬರೆದಿದ್ದಾರೆ.
`ಕಾರವಾರ-ಕೈಗಾ-ಇಳಕಲ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ರಸ್ತೆಯಲ್ಲಿ ಭಾರೀ ಪ್ರಮಾಣದ ವಾಹನಗಳ ಓಡಾಟ ಹೆಚ್ಚಾಗಿದೆ. ಅದರಲ್ಲಿಯೂ ಹೆಚ್ಚಿನ ವಾಹನಗಳು ಕೈಗಾಗೆ ಸಂಚರಿಸುತ್ತಿದ್ದು, ಅಧಿಕ ಬಾರದ ವಾಹನಗಳ ಓಡಾಟದಿಂದಾಗಿ ರಸ್ತೆ-ಸೇತುವೆಗಳು ಧಾರಣಾ ಶಕ್ತಿ ಕಳೆದುಕೊಂಡಿದೆ’ ಎಂದು ಮಾಧವ ನಾಯಕ ಅವರು ವಿವರಿಸಿದ್ದಾರೆ.
`ಸದ್ಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 & 6ನೇ ಅಣು ವಿದ್ಯುತ್ ಘಟಕದ ಕೆಲಸ ಶುರುವಾಗಿದೆ. 30 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಂಪನಿಗೆ ಟೆಂಡರ್ ಆಗಿದ್ದು ಜೆಲ್ಲಿಕಲ್ಲು, ಸಿಮೆಂಟ್, ಉಸುಕು, ಕಬ್ಬಿಣ ಹಾಗೂ ಯಂತ್ರೋಪಕರಣಗಳ ವಾಹನ ಓಡಾಟ ಹೆಚ್ಚಿದೆ. 200ಟನ್ ಮಿಕ್ಕಿದ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಕಾರವಾರದಿಂದ ಕೈಗಾವರೆಗಿನ ರಸ್ತೆ ಅಗಲೀಕರಣ ಅನಿವಾರ್ಯ. ಈ ಕೆಲಸವನ್ನು ಕೈಗಾ ಅಣು ವಿದ್ಯುತ್ ಘಟಕದವರಿಂದ ಮಾಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧವ ನಾಯಕ ಅವರು ಧಾರವಾಡದ ಲೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. `ಕೈಗಾ ಅಣು ಘಟಕದವರೇ ಈ ಕಾಮಗಾರಿ ನಡೆಸಿದರೆ ನಮ್ಮ ಅಭ್ಯಂತರವಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ. `ಈ ಹಿನ್ನಲೆ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ನಿರ್ಣಯಿಸಬೇಕು. ಶಾಸಕ ಸತೀಶ್ ಸೈಲ್, ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ಬಗ್ಗೆ ಗಮನಿಸಬೇಕು’ ಎಂದು ಮಾಧವ ನಾಯಕ ಅವರು ಮನವಿ ಮಾಡಿದ್ದಾರೆ.