`ಸಂಘಟಿತ ಹೋರಾಟದ ಫಲವಾಗಿ ಶಿರಸಿಯಲ್ಲಿ ಅರಣ್ಯ ಅತಿಕ್ರಮಣದಾರರು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಅರಣ್ಯವಾಸಿಗಳಿಗೆ ನ್ಯಾಯ ಸಿಗಲು ಇನ್ನಷ್ಟು ಗಟ್ಟಿ ಹೋರಾಟ ಅಗತ್ಯ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಶಿರಸಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಅವರು ಭೂಮಿ ಹಕ್ಕಿಗಾಗಿ ಕಳೆದ 34 ವರ್ಷದಿಂದ ನಡೆದ ಹೋರಾಟದ ಹಾದಿಯನ್ನು ಸ್ಮರಿಸಿದ್ದಾರೆ.
`ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಅರಣ್ಯವಾಸಿಗಳು ಜಿಲ್ಲೆಯ ಅವಿಭಾಜ್ಯ ಅಂಗ. ಅರಣ್ಯಾವಾಸಿಗಳ ಬದುಕು ಇಲ್ಲದೇ ಅರಣ್ಯವಿಲ್ಲ. ಅರಣ್ಯವಿಲ್ಲದೇ, ಅರಣ್ಯವಾಸಿಗಳು ಬದುಕಲು ಸಾದ್ಯವಿಲ್ಲ’ ಎಂದವರು ಹೇಳಿದ್ದಾರೆ. `ಅರಣ್ಯ ಅತಿಕ್ರಮಣದಾರರ ಹೋರಾಟವು ಉದ್ವೇಗ, ಗಲಾಟೆ, ದೊಂಬಿ, ಹಿಂಸಾಚಾರ, ಕಾನೂನುಬಾಹಿರ ಪ್ರತಿಭಟನೆರಹಿತವಾಗಿದೆ. ಸಾವಿರಾರು ಜನ ಸೇರಿದರೂ ಸಂಘರ್ಷಕ್ಕೆ ಅವಕಾಶವಿಲ್ಲದೇ ಹೋರಾಟ ನಡೆಯುತ್ತಿದೆ. ಕಾರ್ಯಕರ್ತರಿಗೆ ನೀಡಿದ ಕಾನೂನು ಜ್ಞಾನ ತರಬೇತಿ ಹೋರಾಟದ ಪ್ರಬುದ್ದತೆ ಹೆಚ್ಚಿಸಲು ಕಾರಣವಾಗಿದೆ’ ಎಂದವರು ಅನಿಸಿಕೆವ್ಯಕ್ತಪಡಿಸಿದ್ದಾರೆ.
`ಕಾನೂನುಬಾಹಿರವಾಗಿ ಅರಣ್ಯ ಭೂಮಿಯಲ್ಲಿ ಪರವಾನಿಗೆ ಇಲ್ಲದೇ ವಾಸ್ತವ್ಯ ಮತ್ತು ಸಾಗುವಳಿಗೆ ಇತ್ತೀಚಿನ ಕಾನೂನುನಲ್ಲಿ ಅವಕಾಶವಿಲ್ಲ. ಇರುವಂತ ಕಾನೂನಿನಲ್ಲಿ ಭೂಮಿ ಹಕ್ಕಿಗೆ ಪರಿಹಾರ ದೊರಕಿಲ್ಲ. ಶಾಶ್ವತ ಅರಣ್ಯ ಭೂಮಿ ಹಕ್ಕು ಪಡೆಯಲು ಅರಣ್ಯವಾಸಿಗಳಿಗೆ ಕಾನೂನು ಮರಿಚಿಕೆಯಾಗಿದೆ. ಅರಣ್ಯ ಭೂಮಿಯ ಮಂಜೂರಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ’ ಎಂದವರು ಹೇಳಿದ್ದಾರೆ.