ಕಾರ್ಮಿಕರಿಗೆ ರಕ್ಷಣೆ ನೀಡುವ ಕಾನೂನು ತಿದ್ದುಪಡಿ ಮಾಡಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪದ ಅಡಿ ಕರ್ನಾಟಕ ಪ್ರಾಂತ ರೈತ ಸಂಘದವರು ಗೆಜೆಟ್ ಪ್ರತಿ ಸುಟ್ಟು ತಮ್ಮ ಆಕ್ರೋಶಹೊರಹಾಕಿದ್ದಾರೆ.
ಅಂಕೋಲಾದಲ್ಲಿ ಪ್ರತಿಭಟನೆ ನಡೆದಿದ್ದು, `ಕಾರ್ಮಿಕರಿಗೆ ರಕ್ಷಣೆ ನೀಡುವ 29 ಕಾನೂನು ರದ್ದು ಮಾಡಲಾಗಿದೆ. ಬಂಡವಾಳಶಾಹಿ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಿದೆ’ ಎಂದು ಹೋರಾಟಗಾರ ಶಾಂತರಾಮ ನಾಯಕ ದೂರಿದ್ದಾರೆ.
`79 ವರ್ಷಗಳಿಂದ ಕಾರ್ಮಿಕರ ರಕ್ಷಣೆಗಿದ್ದ ಕಾನೂನಿಗೆ ಇದೀಗ ಬೆಲೆ ಇಲ್ಲ. ಒಂದೇ ರಾತ್ರಿ ಅದನ್ನು ರದ್ಧು ಮಾಡಲಾಗಿದ್ದು ಅಸಂವಿಧಾನಾತ್ಮಕ ರೀತಿ ಕಾರ್ಮಿಕ ಸಂಹಿತೆ ರಚಿಸಲಾಗಿದೆ’ ಎಂದವರು ದೂರಿದ್ದಾರೆ. `ಸರ್ಕಾರ ಇದನ್ನು ಸುಧಾರಣಾ ನೀತಿ ಎನ್ನುತ್ತಿದೆ. ಆದರೆ, ಇದು ಸುಧಾರಣಾ ನೀತಿ ಅಲ್ಲ. ದುಡಿಯುವ ವರ್ಗದ ಮೇಲೆ ಬಂಡವಾಳಶಾಹಿಗಳ ಸವಾರಿ ಮಾಡಲು ಅವಕಾಶ ನೀಡಿದ ಸಂಹಿತೆ ಹೊರಬಿದ್ದಿದೆ’ ಎಂದವರು ಕಿಡಿಕಾರಿದ್ದಾರೆ.
ಅಂಕೋಲಾ ಸಿಐಟಿಯು ತಾಲೂಕು ಸಂಚಾಲಕ ಎಚ್ ಬಿ ನಾಯಕ, ರೈತ ಸಂಘದ ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ , ಪದಾಧಿಕಾರಿಗಳಾದ ಮಾದೇವ ಗೌಡ, ವೆಂಕಟರಮಣ ಗೌಡ, ಉದಯ ನಾಯ್ಕ, ರಾಜಗೋಪಾಲ್ ಶೇಟ್ ಸಂಹಿತೆಯನ್ನು ಸುಟ್ಟು ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದ್ದಾರೆ.