ಸರ್ಕಾರಿ ಕಚೇರಿ ಬಳಿಯಿದ್ದ ಮಾವಿನ ಮರ ಕಟಾವು ವೇಳೆ ಸುರಕ್ಷತೆ ಬಗ್ಗೆ ಗಮನಹರಿಸಿದ ಶ್ರೀಧರ ಪಾಲೇಕರ್ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ಅವರ ಜೊತೆಯಿದ್ದ ಗಣಪತಿ ಸಿದ್ದಿ ಅವರಿಗೂ ಗಾಯವಾಗಿದೆ.
ಯಲ್ಲಾಪುರ ಪಟ್ಟಣ ಪಂಚಾಯತ ಬಳಿ ಭಾರೀ ಗಾತ್ರದ ಮಾವಿನ ಮರವಿತ್ತು. ಆ ಮರವನ್ನು ಕಟಾವು ಮಾಡಲು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಯಲ್ಲಪ್ಪಾ ರಾಮಾ ಶಾಪುರಕರ್ ಅವರು ರವೀಂದ್ರ ನಗರದ ಶ್ರೀಧರ ಪ್ರಭಾಕರ ಪಾಲೇಕರ್ ಅವರಲ್ಲಿ ಹೇಳಿದ್ದರು. ಸದ್ಯ ಅಂಬೇಡ್ಕರ ನಗರದಲ್ಲಿ ವಾಸವಾಗಿರುವ ಶ್ರೀಧರ ಪಾಲೇಕರ್ ಅವರು ನವೆಂಬರ್ 23ರಂದು ಬಚನಳ್ಳಿಯ ಅಭಿಷೇಕ ಗಣಪತಿ ಸಿದ್ದಿ ಅವರ ಜೊತೆ ಸ್ಥಳಕ್ಕೆ ಹೋಗಿದ್ದರು.
ಮರ ಕಟಾವು ಮಾಡಲು ಅವರಲ್ಲಿ ಸುರಕ್ಷತಾ ಸಾಮಗ್ರಿಗಳಿರಲಿಲ್ಲ. ಸರ್ಕಾರಿ ಸಿಬ್ಬಂದಿಯೂ ಅದನ್ನು ಪೂರೈಸಲಿಲ್ಲ. ಹೀಗಾಗಿ ಇದ್ದ ಸಾಮಗ್ರಿಗಳನ್ನು ಬಳಸಿಯೇ ಅವರಿಬ್ಬರು ಕೆಲಸ ಶುರು ಮಾಡಿದರು. ಮರ ಕಟಾವು ವೇಳೆ ಅವಘಡವೊಂದು ನಡೆದಿದ್ದು, ಅದರಲ್ಲಿ ಶ್ರೀಧರ ಪಾಲೇಕರ್ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಗಣಪತಿ ಸಿದ್ದಿ ಅವರ ಕಾಲಿಗೂ ಗಾಯವಾಯಿತು.
ಶ್ರೀಧರ ಪಾಲೇಕರ್ ಅವರ ಪುತ್ರ ಕೃಷ್ಣ ಪಾಲೇಕರ್ ಅವರು ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಗಾಯ ನೋಡಿದ ವೈದ್ಯರು ಕಾರವಾರ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಿದರು. ಅಲ್ಲಿಯೂ ನೋವು ಕಡಿಮೆ ಆಗದ ಕಾರಣ ಕುಟುಂಬದವರು ಶ್ರೀಧರ ಪಾಲೇಕರ್ ಅವರನ್ನು ಶಿರಸಿಯ ಶಿವಂ ಆಸ್ಪತ್ರೆಗೆ ದಾಖಲಿಸದರು. ಗಾಯಕ್ಕೆ ಚಿಕಿತ್ಸೆ ಕೊಡಿಸಲು ಕೃಷ್ಣ ಪಾಲೇಕರ್ ಅವರ ಬಳಿ ಹಣವಿರಲಿಲ್ಲ. ಕೆಲಸಕ್ಕೆ ನೇಮಿಸಿದವರು ಸಹ ದೊಡ್ಡ ಸಹಾಯ ಮಾಡಲಿಲ್ಲ. ಅದಾಗಿಯೂ, ಕೃಷ್ಣ ಪಾಲೇಕರ್ ಅವರು ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ.