ಸರಾಯಿ ಅಂಗಡಿಗೆ ಬಂದಿದ್ದ ಬನವಾಸಿಯ ಪರಶುರಾಮ ವಡ್ಡರ್ ಅಲ್ಲಿಯೇ ವಿಷ ಕುಡಿದಿದ್ದಾರೆ. ಅದಾದ ನಂತರ ಅವರಿಗೆ ಬದುಕುವ ಆಸೆಯಾಗಿದ್ದು, ಅವರಿವರ ಸಹಾಯಪಡೆದು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಮೂರು ಆಸ್ಪತ್ರೆ ತಿರುಗಾಡಿದರೂ ಅವರ ಬದುಕುವ ಆಸೆ ಈಡೇರಲಿಲ್ಲ.
ಶಿರಸಿ ಬನವಾಸಿಯ ಸೊರಬಾ ರಸ್ತೆಯ ಯುನಿವರ್ಸಲ್ ಶಾಲೆ ಬಳಿಯ ಪರಶುರಾಮ ವಡ್ಡರ್ ವಾಸವಾಗಿದ್ದರು. ಕೂಲಿ ಕೆಲಸ ಮಾಡುವ ಅವರು ನಿತ್ಯ ಸರಾಯಿ ಸೇವನೆ ಮಾಡುತ್ತಿದ್ದರು. ಅಕ್ಟೊಬರ್ 28ರಂದು ಅವರು ಬನವಾಸಿಯಲ್ಲಿರುವ ರಾಘವೇಂದ್ರ ವೈನ್‌ಶಾಫ್’ಗೆ ಹೋಗಿದ್ದರು. ಸರಾಯಿ ಅಂಗಡಿ ಹಿಂದೆ ಹೋಗಿ ಅವರು ವಿಷ ಕುಡಿದರು.
ವಿಷ ಕುಡಿದ ನಂತರ ಪರಶುರಾಮ ವಡ್ಡರ್ ಅವರಿಗೆ ಬದುಕುವ ಆಸೆಯಾಯಿತು. ಹೀಗಾಗಿ ತಾನು ವಿಷ ಕುಡಿದ ಬಗ್ಗೆ ಅಲ್ಲಿದ್ದ ಜನರಿಗೆ ಹೇಳಿದರು. ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದರು. ಪರಶುರಾಮ ವಡ್ಡರ್ ಅವರ ತಮ್ಮ ದೇವರಾಜ ವಡ್ಡರ್ ಅವರು ಆಗಮಿಸಿ ಅಣ್ಣನನ್ನು ಮೊದಲು ಬನವಾಸಿ ಆಸ್ಪತ್ರೆಗೆ ದಾಖಲು ಮಾಡಿದರು. ಅದಾದ ನಂತರ ಶಿರಸಿ ಆಸ್ಪತ್ರೆಗೆ ಕರೆತಂದರು.
ವಿಷ ವ್ಯಾಪಕ ಪ್ರಮಾಣದಲ್ಲಿ ಹೊಟ್ಟೆ ಸೇರಿದ್ದರಿಂದ ಹುಬ್ಬಳ್ಳಿ ಕಿಮ್ಸ’ಗೆ ಕರೆದೊಯ್ಯಲಾಯಿತು. ಅಲ್ಲಿ ಆರು ದಿನ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ನವೆಂಬರ್ 3ರಂದು ಪರಶುರಾಮ ವಡ್ಡರ್ ಅವರು ಸಾವನಪ್ಪಿದರು. ವಿಷಯ ತಿಳಿದು ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.