ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಮೂರು ತಿಂಗಳಿನಿoದ ಸಂಬಳವಾಗಿಲ್ಲ. ಹೀಗಾಗಿ ನಿತ್ಯವೂ ರೋಗಿಗಳ ಆರೈಕೆ ಮಾಡುವ ಅಲ್ಲಿನ ಸಿಬ್ಬಂದಿ ಕುಟುಂಬದ ಆರೈಕೆ ಮಾಡಲಾಗದೇ ಹೈರಣಾಗಿದ್ದಾರೆ.
ಸಂಬಳ ಆಗದ ಬಗ್ಗೆ ನೌಕರರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ. `ನೀಡುವ ವೇತನ ಸಹ ಕಡಿಮೆ. ಅದರಲ್ಲಿಯೂ 2-3 ತಿಂಗಳಿಗೆ ಒಮ್ಮೆ ಸಂಬಳ ಕೊಡುತ್ತಿದ್ದು, ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ’ ಎಂದು ಅಲ್ಲಿನವರು ನೋವು ತೋಡಿಕೊಂಡಿದ್ದಾರೆ.
ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 25 ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅದರಲ್ಲಿ ನಾನ್ ಕ್ಲಾರಿಕಲ್ 10 ಜನ ಇದ್ದರೆ, ಗ್ರೂಪ್ ಡಿ ಹುದ್ದೆಯಲ್ಲಿ 15 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. `ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಕಾರಣ ಕಿರಾಣಿ ಅಂಗಡಿ, ವಿದ್ಯತ್ ಬಿಲ್, ಸಾಲದ ಹಣ ಮರುಪಾವತಿ, ಶಾಲಾ ಮಕ್ಕಳ ಶುಲ್ಕ, ಹಾಲು, ತರಕಾರಿ ಎಲ್ಲರಲ್ಲಿಯೂ ಸಾಲ ಸಾಮಾನ್ಯವಾಗಿದೆ. ಹಣ ಹೊಂದಿಸುವುದೇ ಕಷ್ಟವಾಗಿದ್ದು, ಸಿಗುವ ಸಂಬಳ ಸಾಲದ ಬಡ್ಡಿಗೆ ಸಮನಾಗಿರುತ್ತದೆ’ ಎಂದವರು ಕಣ್ಣೀರು ಹಾಕಿದರು.