ಕಾರಿನಲ್ಲಿ ಬಂದು ಜಾನುವಾರು ಕದಿಯುವ ಕಳ್ಳರ ಗುಂಪು ಸಕ್ರೀಯವಾಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಭಟ್ಕಳ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಶುರು ಮಾಡಿದ್ದಾರೆ.
ಭಟ್ಕಳ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ಗೋವುಗಳ ಕಳ್ಳತನ ನಡೆಯುತ್ತಿದೆ. ಐಷಾರಾಮಿ ಕಾರಿನಲ್ಲಿ ಬರುವವರು ಗೋವುಗಳನ್ನು ಕದ್ದು ಸಾಗಿಸುತ್ತಿದ್ದಾರೆ. ನಗರದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಆಕಳುಗಳನ್ನು ಕಾರಿನಲ್ಲಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಸುಕಿನ ಜಾವ ಈ ಕಳ್ಳತನ ನಡೆದಿದ್ದು, ವಿಡಿಯೋ ನೋಡಿದ ಪೊಲೀಸರು ಭಟ್ಕಳ ಪುರವರ್ಗದ ರೆಹಾನ್ ಹಾಗೂ ಫೈಜಾನ್ ಎಂಬಾತರನ್ನು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಕ್ಟೊಬರ್ 15ರಂದು ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ವಿಡಿಯೋ ಇದೀಗ ವೈರಲ್ ಆಗಿದೆ. 3-4 ಜನ ಸೇರಿ ಗೋವನ್ನು ಅಡ್ಡಗಟ್ಟಿ ಕಾರಿನ ಡಿಕ್ಕಿಯೊಳಗೆ ತುಂಬಿದ್ದಾರೆ. ಆ ಗೋವು ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದ್ದು, ಅದಾಗಿಯೂ ಕ್ರೂರಿಗಳು ಬಿಟ್ಟಿಲ್ಲ.
ಕೃಷಿಕರ ಜೀವನಾಧಾರವಾಗಿರುವ ಗೋವುಗಳನ್ನು ಈ ರೀತಿಯಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಗೋವು ಕಳ್ಳತನ ನಡೆದಿದ್ದು, ಗೋ ಕಳ್ಳರ ಮೇಲೆ ಶೂಟೌಟ್ ಸಹ ನಡೆದಿತ್ತು. ಅದಾಗಿಯೂ ಕಳ್ಳರು ಬಗ್ಗೆದೇ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ.