ದೊಡ್ಡ ಶಾಲೆ ಎಂದು ಗುರುತಿಸಿಕೊಂಡ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಿರಣ ಟಪೋಜಿ ಅವರು ಪಾಠ ಮಾಡಿದಕ್ಕಿಂತಲೂ ಹೆಚ್ಚಾಗಿ ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ಕಾಟ ಕೊಟ್ಟಿರುವುದೇ ಹೆಚ್ಚು. ವಿದ್ಯಾರ್ಥಿನಿಯೊಬ್ಬರನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ಈತನ ಮೇಲಿದ್ದು, ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.
Advertisement. Scroll to continue reading.
ಮುಂಡಗೋಡದ ಪ್ರತಿಷ್ಠಿತ ಪ್ರೌಢಶಾಲೆಯಲ್ಲಿ ಕಿರಣ ಟಪೋಜಿ ದೈಹಿಕ ಶಿಕ್ಷಕರಾಗಿದ್ದರು. ಪಾಠ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಸಾಮಾನ್ಯವಾಗಿದ್ದು, ಇದನ್ನು ವಿರೋಧಿಸುವ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಕಾಟ ಕೊಡುತ್ತಿದ್ದರು. ವಿದ್ಯಾರ್ಥಿನಿಯರು ಒಬ್ಬರೇ ಇರುವುದನ್ನು ಅರಿತು ಅವರ ಮನೆಗೆ ಹೋಗುವುದನ್ನು ಸಹ ಕಿರಣ ಟಪೋಜಿ ರೂಢಿಸಿಕೊಂಡಿದ್ದರು. ಹೀಗೆ ಮಕ್ಕಳ ಮನೆಯೊಂದಕ್ಕೆ ಹೋದ ಅವರು ಅಲ್ಲಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದರು.
ಒತ್ತಾಯಪೂರ್ವಕವಾಗಿ ತನ್ನನ್ನು ಬಳಸಿಕೊಂಡಿದ್ದನ್ನು ಬಾಲಕಿ ಸಹಿಸಿಕೊಂಡಿರಲಿಲ್ಲ. ಆದರೆ, `ಈ ವಿಷಯ ಎಲ್ಲಾದರೂ ಹೇಳಿದರೆ ಜೀವ ತೆಗೆಯುವೆ’ ಎಂಬ ಬೆದರಿಕೆ ಒಡ್ಡುವುದನ್ನು ಕಿರಣ ಟಪೋಜಿ ಮರೆತಿರಲಿಲ್ಲ. ಹೀಗಾಗಿ ಹಿಂಸೆಯನ್ನು ಆ ಬಾಲಕಿ ಅನಿವಾರ್ಯವಾಗಿ ಸಹಿಸಿಕೊಂಡಿದ್ದು, ಅದಾಗಿಯೂ ಆ ದೈಹಿಕ ಶಿಕ್ಷಕನ ದೈಹಿಕ ದುರ್ಬಳಕೆಯ ಆಟ ಹಾಗೇ ಮುಂದುವರೆದಿತ್ತು.
ಈ ನಡುವೆ ವಿದ್ಯಾರ್ಥಿಗಳ ಮೇಲೆ ಹಲ್ಲೆ, ದುರ್ವರ್ತನೆಯ ಆರೋಪದ ಹಿನ್ನಲೆ ಆ ಶಾಲೆಯವರು ಕಿರಣ ಟಪೋಜಿಯನ್ನು ಕೈ ಬಿಟ್ಟಿದ್ದರು. ಕೆಲಸದಿಂದ ವಜಾ ಆಗಿದ್ದರೂ ಆತನ ಕಾಮದಾಟಗಳು ನಿಂತಿರಲಿಲ್ಲ. ಹೀಗಾಗಿ ಇನ್ನೊಂದು ಶಾಲೆಗೆ ಸೇರಿದ ಕಿರಣ ಟಪೋಜಿ ಅಲ್ಲಿಯೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಇದನ್ನು ಸಹಿಸದ ವಿದ್ಯಾರ್ಥಿನಿಯೊಬ್ಬರು ಪಾಲಕರಿಗೆ ದೂರು ನೀಡಿದ್ದು, ಪಾಲಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.