ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆ ಮೇಲೆ ವಿಕೃತಿ ಮೆರೆದ ಕಾಮುಕನಿಗೆ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ. ಪಿಐ ರಮೇಶ ಹೂಗಾರ್, ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ಪ್ರಯತ್ನದಿಂದಾಗಿ ತಪ್ಪು ಮಾಡಿದವನಿಗೆ ಕಂಬಿ ಎಣಿಸುವ ಶಿಕ್ಷೆ ದೊರೆತಿದೆ. ಪ್ರಕರಣದ ಗಂಭೀರತೆ ಅರಿತ ನ್ಯಾಯಾಧೀಶ ಕಿರಣ ಕಿಣಿ ಅವರು ತಪ್ಪಿತಸ್ಥನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.
Advertisement. Scroll to continue reading.
ಜೊಯಿಡಾದ ಅಣಶಿ ಗ್ರಾಮದ ಕೈಲವಾಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಅಂಚಿನ ಊರಿನಲ್ಲಿ ಸಂತ್ರಸ್ತೆ ವಾಸವಾಗಿದ್ದರು. ಅಣಶಿ ವನ್ಯಜೀವಿ ವಲಯದ ಬಳಿ ಅವರು ಹೈನುಗಾರಿಕೆ ನಡೆಸಿಕೊಂಡಿದ್ದು, ಸಮೀಪದ ಅರಣ್ಯಕ್ಕೆ ಜಾನುವಾರುಗಳನ್ನು ಮೇವಿಗೆ ಬಿಡುತ್ತಿದ್ದರು. 2018ರ ಡಿಸೆಂಬರ್ 1ರಂದು ಆ ಮಹಿಳೆ ಎಂದಿನoತೆ ಹಸುಗಳ ಜೊತೆ ಕಾಡಿಗೆ ಹೋಗಿದ್ದರು. ದಿನವಿಡೀ ಮೇವುಣಿಸಿ ಸಂಜೆ ಮನೆಗೆ ಮರಳುವಾಗ ಅದೇ ಭಾಗದ ಉಲ್ಲಾಸ ಸಡಕೋ ಗಾವಡಾ ಎದುರಾದರು.
ಹುಲ್ಲು ಮೇಯಿಸುತ್ತಿದ್ದ ಮಹಿಳೆ ಒಂಟಿಯಾಗಿರುವುದನ್ನು ಉಲ್ಲಾಸ ಗಾವಡಾ ಗಮನಿಸಿದರು. ಆಕೆಯನ್ನು ಹಿಂದಿನಿoದ ಗಟ್ಟಿಯಾಗಿ ತಬ್ಬಿಕೊಂಡರು. ಮಹಿಳೆ ಇದನ್ನು ವಿರೋಧಿಸಿದಾಗ ಆಕೆ ಕೈ ಹಾಗೂ ಕುತ್ತಿಗೆಗೆ ಉಗುರಿನಿಂದ ಪರಿಚಿದರು. ಮಹಿಳೆಯ ಕೂದಲು ಹಿಡಿದು ಎಳೆದಾಡಿದರು. ಮಹಿಳೆ ನೆಲಕ್ಕೆ ಬಿದ್ದಾಗ ಆಕೆಯ ಸೀರೆ ಹರಿದು ಮಾನ ಕಳೆದರು. ಮಹಿಳೆ ಕೂಗಿ ಪ್ರತಿಭಟಿಸಿದರೂ ಆ ಕಾಡಿನಲ್ಲಿ ಆಕೆಯ ರಕ್ಷಣೆಗೆ ಯಾರೂ ಇರಲಿಲ್ಲ. ಈ ಸನ್ನಿವೇಶ ದುರುಪಯೋಗಪಡಿಸಿಕೊಂಡ ಉಲ್ಲಾಸ ಗಾವಡಾ ಅವರು ಮಹಿಳೆಯ ಇಚ್ಚೆಗೆ ವಿರುದ್ಧವಾದ ಕೆಲಸ ಮಾಡಿದರು.
ಅದಾದ ನಂತರ ಸಂತ್ರಸ್ತ ಮಹಿಳೆಗೆ ಉಲ್ಲಾಸ ಗಾವಡಾ ಅವರು ಬೆದರಿಕೆ ಒಡ್ಡಿದರು. `ಈ ವಿಷಯ ಎಲ್ಲಾದರೂ ಬಾಯ್ಬಿಟ್ಟರೆ ಜೀವ ತೆಗೆಯುವೆ’ ಎಂದು ಹೆದರಿಸಿದರು. ಉಲ್ಲಾಸ ಗಾವಡಾ ಅವರು ಸಾಕ್ಷಿನಾಶಕ್ಕಾಗಿ ತಾವು ಧರಿಸಿದ್ದ ಬಟ್ಟೆಯನ್ನು ತೊಳೆದು ಒಣಗಿಸಿದ್ದರು. ಈ ಎಲ್ಲಾ ವಿಷಯ ಅರಿತ ಆಗಿನ ಜೊಯಿಡಾ ಪಿಐ ರಮೇಶ ಹೂಗಾರ್ ಅವರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದರು. ವಿವಿಧ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಶಿರಸಿ ನ್ಯಾಯಾಲಯಕ್ಕೆ ಈ ಪ್ರಕರಣ ಬಂದಿದ್ದು, ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಪ್ರಕರಣದ ಹಿನ್ನಲೆ ಗಮನಿಸಿದರು. ಸಂತ್ರಸ್ತೆಗೆ ಆದ ಅನ್ಯಾಯದ ಬಗ್ಗೆ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.
ಪೊಲೀಸ್ ಸಿಬ್ಬಂದಿ ಲಿಯಾಕತ್ ಅಲಿ ಹಾಗೂ ಖಲೀಲ್ ಮುಲ್ಲಾ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಕರೆತಂದರು. ಉಲ್ಲಾಸ ಗಾವಡಾ ಅವರ ಮಾತನ್ನು ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪ ಸಾಭೀತಾಗಿರುವುದನ್ನು ಖಚಿತಪಡಿಸಿಕೊಂಡರು. ಕೊನೆಗೆ ವಿಕೃತ ಕಾಮಿಗೆ 10 ವರ್ಷ ಜೈಲು ಶಿಕ್ಷೆ ಜೊತೆ 15 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಸಂತ್ರಸ್ತೆಗೆ 10 ಸಾವಿರ ರೂ ಪರಿಹಾರ ಒದಗಿಸುವಂತೆಯೂ ಸೂಚಿಸಿದರು.
`ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. ಸಹಾಯಕ್ಕಾಗಿ 181ಗೆ ಫೋನ್ ಮಾಡಿ.