ಶಿಕ್ಷಕ ಉದಯ ಅವರು ಇಷ್ಟಪಟ್ಟು ಖರೀದಿಸಿದ ಕಾರನ್ನು ಆ ಶಾಲೆಯ ಮಕ್ಕಳು ಕಷ್ಟಪಟ್ಟು ತೊಳೆಯುತ್ತಿದ್ದಾರೆ. `ಕಾರಿಗೆ ಕೊಂಚವೂ ದೂಳು ಬಾರದಂತೆ ನೋಡಿಕೊಳ್ಳಬೇಕು’ ಎಂದು ಉದಯ ಅವರು ತಾಕೀತು ಮಾಡಿದ್ದು, ಮಕ್ಕಳು ಅದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ!
ಹಳಿಯಾಳದ ಬಿ ಕೆ ಹಳ್ಳಿ ಶಾಲೆಯಲ್ಲಿ ಉದಯ ಅವರು ಶಿಕ್ಷಕರಾಗಿದ್ದಾರೆ. ನಿತ್ಯವೂ ಅವರು ಕಾರಿನಲ್ಲಿ ಶಾಲೆಗೆ ಬರುತ್ತಾರೆ. ಅವರ ಆಗಮನದ ನಂತರ ಆ ಕಾರು ತೊಳೆಯುವುದು ನಿತ್ಯದ ಸಂಪ್ರದಾಯ. ಶಾಲಾ ಅವಧಿಯಲ್ಲಿಯೇ ಪಾಠ ಬಿಟ್ಟು ಮಕ್ಕಳು ಕಾರು ತೊಳೆಯಲು ಹೋಗುತ್ತಾರೆ. ಶಿಕ್ಷಕರ ಈ ಉದ್ದಟತನದಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ ಎಂಬುದು ಅಲ್ಲಿನವರ ದೂರು.
ತಮ್ಮ ಖಾಸಗಿ ಕೆಲಸ ಮಾಡಿಸಿಕೊಳ್ಳುವ ಶಿಕ್ಷಕನ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಅದೇ ದೂರಿನ ಆಧಾರದಲ್ಲಿ ಬಿಇಓ ಪ್ರಮೋದ ಮಹಾಲೆ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಗೆ ದೂರು ನೀಡಿದವರು ಸಾಕ್ಷಿಗಾಗಿ ಫೋಟೋವನ್ನು ಹರಿಬಿಟ್ಟಿದ್ದಾರೆ.