ದೇವಾಲಯಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಕಾಣಿಕೆ ಹುಂಡಿಯ ಹಣ ಕಣ್ಮರೆಯಾಗುತ್ತಿದೆ. ಬನವಾಸಿಯ ಗುಡ್ನಾಪುರದಲ್ಲಿರುವ ದೇಗುಲದಲ್ಲಿಯೂ ದುಷ್ಟರು ಕಾಣಿಕೆ ಹುಂಡಿ ದೋಚಿದ್ದಾರೆ.
ಶಿರಸಿಯ ಬನವಾಸಿ ಬಳಿಯ ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವಸ್ಥಾನವಿದೆ. ಅನೇಕ ಭಕ್ತರು ಈ ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ. ದೇಗುಲದ ಹೊರಗೆ ಕಾಣಿಕೆ ಡಬ್ಬಿಯಿರಿಸಲಾಗಿದ್ದು, ಜನ ಭಕ್ತಿಯಿಂದ ಅಲ್ಲಿ ಕಾಣಿಕೆ ಸಲ್ಲಿಸುತ್ತಾರೆ. ಇದನ್ನು ಅರಿತಿದ್ದ ದುಷ್ಟರು ಆ ಕಾಣಿಕೆ ಡಬ್ಬಿಗೆ ಕನ್ನ ಹಾಕಿದ್ದಾರೆ.
ಗುಡ್ನಾಪುರ ಬಂಗಾರೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹನುಮಂತ ಕನ್ನಾ ನಾಯ್ಕ ಅವರು ನಿತ್ಯವೂ ದೇಗುಲಕ್ಕೆ ಭೇಟಿ ನೀಡುತ್ತಾರೆ. ಡಿಸೆಂಬರ್ 2ರ ಸಂಜೆ ಅವರು ಭೇಟಿ ನೀಡಿದ್ದು, ಆ ವೇಳೆ ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಕಾಣಿಕೆ ಡಬ್ಬಿ ಭದ್ರವಾಗಿದದನ್ನು ಅವರು ಗಮನಿಸಿದ್ದರು. ಆದರೆ, ಡಿಸೆಂಬರ್ 3ರಂದು ದೇಗುಲದ ಅರ್ಚಕ ಗಣಪತಿ ಶೇಟ್ ಅವರು ಹನುಮಂತ ನಾಯ್ಕ ಅವರಿಗೆ ಫೋನ್ ಮಾಡಿ ದುಗುಡವ್ಯಕ್ತಪಡಿಸಿದರು.
`ಕಾಣಿಕೆ ಹುಂಡಿಯಲ್ಲಿದ್ದ ಕಾಸು ಕಳ್ಳತನವಾಗಿದೆ’ ಎಂದು ಗಣಪತಿ ಶೇಟ್ ಅವರು ಹೇಳಿದರು. ತಕ್ಷಣ ಹನುಮಂತ ನಾಯ್ಕ ಅವರು ದೇಗುಲ ಸಮಿತಿಯ ಇನ್ನಿತರ ಸದಸ್ಯರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಅವರೆಲ್ಲರೂ ಸೇರಿ ದೇಗುಲದ ಬಳಿ ಹೋದಾಗ ಅಲ್ಲಿದ್ದ ಎರಡು ಕಾಣಿಕೆ ಹುಂಡಿ ಜಖಂ ಆಗಿದ್ದವು. ಕಳ್ಳರು ಅದರೊಳಗಿದ್ದ ಅಂದಾಜು 10 ಸಾವಿರ ರೂ ಹಣವನ್ನು ದೋಚಿದ್ದರು. ದೇವರ ದುಡ್ಡನ್ನು ಬಿಡದೇ ಅಪಹರಿಸಿದವರ ಪತ್ತೆಗಾಗಿ ಹನುಮಂತ ನಾಯ್ಕ ಅವರು ಪೊಲೀಸ್ ದೂರು ನೀಡಿದರು.