ಉತ್ತರ ಕನ್ನಡ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ಮುರುಡೇಶ್ವರದ ಪ್ರಸಿದ್ಧ ಸ್ಕೂಬಾ ಡೈವಿಂಗ್ ಸಂಸ್ಥೆಯಾದ ನೇತ್ರಾಣಿ ಅಡ್ವೆಂಚರ್ಸ’ನ ಗೂಗಲ್ ಖಾತೆಯನ್ನು ಸೈಬರ್ ಕ್ರೈಂ ಕಳ್ಳರು ಹ್ಯಾಕ್ ಮಾಡಿದ್ದಾರೆ!
ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯೂ ಮುರುಡೇಶ್ವರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ. ಅಲ್ಲಿಗೆ ಬರುವ ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಸಂಸ್ಥೆ ಸಿಬ್ಬಂದಿ ಅವರಿಗೆ ಊಟ-ವಸತಿ ಕಲ್ಪಿಸಿ ಜಲ ಸಾಹಸ ಚಟುವಟಿಕೆಗೆ ಕರೆದೊಯ್ಯುತ್ತಿದ್ದಾರೆ. ಸ್ಕೂಬಾ ಡೈವಿಂಗ್ ಮಾಡಲು ಬಯಸುವವರಿಗೆ 3500ರೂ ದರದಲ್ಲಿ ಈ ಸಂಸ್ಥೆಯವರು ಆಳ ಸಮುದ್ರಕ್ಕೆ ಕರೆದೊಯ್ದು ಜಲಚರಗಳ ಪರಿಚಯ ಮಾಡಿಸುತ್ತ ಬಂದಿದ್ದಾರೆ. ಹೀಗಿರುವಾಗ ಸೈಬರ್ ಕ್ರೈಂ ಖದೀಮರು ಇದೀಗ ನೇತ್ರಾಣಿ ಅಡ್ವೆಂಚರ್ಸ’ನ ಗೂಗಲ್ ಖಾತೆ ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸಲು ಶುರು ಮಾಡಿದ್ದಾರೆ.
ಸ್ಕೂಬಾ ಡೈವಿಂಗ್ ಪ್ರಕ್ರಿಯೆಯಲ್ಲಿ ಅನುಭವಿ ಸಿಬ್ಬಂದಿ ಹೊಂದಿರುವ ನೇತ್ರಾಣಿ ಅಡ್ವೆಂಚರ್ಸ್ ನ ಅಧಿಕೃತ ಗೂಗಲ್ ವ್ಯವಹಾರಿಕ ಖಾತೆಯ ವಿವರವನ್ನು ಅಪರಿಚಿತರು ತಿದ್ದಿದ್ದಾರೆ. ಅಲ್ಲಿ ನಕಲಿ ಸಂಪರ್ಕ ಸಂಖ್ಯೆ ಸೇರಿಸಿ ಗ್ರಾಹಕರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ ಹರಿಕಂತ್ರ ಅವರ ಗಮನಕ್ಕೆ ಬಂದ ತಕ್ಷಣ ಅವರು ಸಹಾಯ ಕೋರಿ ಸೈಬರ್ ತಜ್ಞರ ಮೊರೆ ಹೋಗಿದ್ದಾರೆ. ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ತಮಗಾದ ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ.
`ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಸೈಬರ್ ಅಪರಾಧದ ಬಗ್ಗೆ ಅರಿವು ಹೊಂದುವುದು ಮುಖ್ಯವಾಗಿದ್ದು, ಅಕ್ರಮ ಜಾಲಕ್ಕೆ ಸಿಲುಕದೇ ಎಚ್ಚರವಾಗಿರಬೇಕು. ಪ್ರವಾಸದ ಅವಧಿಯಲ್ಲಿ ಊಟ, ವಸತಿ, ಜಲ ಸಾಹಸ ಚಟುವಟಿಕೆ ಸೇರಿ ಯಾವುದೇ ವಿಷಯವಾಗಿ ನೇತ್ರಾಣಿ ಅಡ್ವೆಂಚರ್ಸ್ ನೆರವಿಗಾಗಿ 9900431111ಗೆ ಮಾತ್ರ ಫೋನ್ ಮಾಡಬೇಕು’ ಎಂದು ಗಣೇಶ ಹರಿಕಂತ್ರ ಅವರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವ್ಯವಹಾರಗಳ ಬಗ್ಗೆ ಪೊಲೀಸ್ ದೂರು ನೀಡುವಂತೆಯೂ ಅವರು ಜಾಗೃತಿ ಮೂಡಿಸಿದ್ದಾರೆ.