ಖಾಸಗಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗವಿದ್ದರೂ ಸರ್ಕಾರಿ ಕಚೇರಿಯಲ್ಲಿನ ಕಂಪ್ಯುಟರ್ ಆಪರೇಟರ್ ಹುದ್ದೆಗೆ ಕ್ವಿನಿ ಡಿಸೋಜಾ ಅವರು ಆಸೆಪಟ್ಟಿದ್ದಾರೆ. ಈ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರು ಒಂದುವರೆ ಲಕ್ಷ ರೂ ಖರ್ಚು ಮಾಡಿದ್ದಾರೆ. ಆದರೆ, ಆ ಕೆಲಸ ಮಾತ್ರ ಅವರಿಗೆ ಸಿಕ್ಕಿಲ್ಲ!
Advertisement. Scroll to continue reading.
ಹಳಿಯಾಳದ ಗರಡೊಳ್ಳಿಯಲ್ಲಿ ಕ್ವಿನಿ ಡಿಸೋಜಾ (25) ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅವರಿಗೆ ಕೈ ತುಂಬಾ ಸಂಬಳ ಸಿಗುತ್ತಿದೆ. ಅದಾಗಿಯೂ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಹೀಗಾಗಿ ಅವರು ತಮ್ಮ ಬಯಕೆಯನ್ನು ತಂದೆಯ ಬಳಿ ಹೇಳಿಕೊಂಡಿದ್ದು, ಕ್ವಿನಿ ಡಿಸೋಜಾ ಅವರ ತಂದೆ ಇಶಾಂತ ಡಿಸೋಜಾ ಅವರು ಸಹ ಮಗಳ ಉದ್ಯೋಗದ ಕನಸು ಈಡೇರಿಕೆಗಾಗಿ ದುಡ್ಡು ಬಿಚ್ಚಿದ್ದಾರೆ.
ಹಳಿಯಾಳ ಇಂದಿರಾ ನಗರದ ಮಂಜುಳಾ ಈರಣ್ಣ ಮಾದರ್ ಹಾಗೂ ಆಕಾಶ ಪ್ರಭಾಕರ ಗಜಕೋಶ ಸೇರಿ `ಹಳಿಯಾಳ ತಹಶೀಲ್ದಾರ್ ಕಚೇರಿಯಲ್ಲಿ ಡಾಟಾ ಆಪರೇಟರ್ ಹುದ್ದೆ ಖಾಲಿ ಇದೆ’ ಎಂದು ಕ್ವಿನಿ ಡಿಸೋಜಾ ಅವರಿಗೆ ಹೇಳಿದ್ದಾರೆ. `ಈ ಹುದ್ದೆ ಕೊಡಿಸಲು ಹಣ ಕೊಡಬೇಕಾಗುತ್ತದೆ’ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಕ್ವಿನಿ ಡಿಸೋಜಾ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಅವರ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಕಡಿಮೆ ಬಿದ್ದಾಗ ತಂದೆಯ ಮೊರೆ ಹೋಗಿದ್ದು, ಇಶಾಂತ ಡಿಸೋಜಾ ಅವರ ಬ್ಯಾಂಕ್ ಖಾತೆ ಹಣವನ್ನು ಖರ್ಚು ಮಾಡಿದ್ದಾರೆ.
2024ರ ಸೆಪ್ಟೆಂಬರ್ 9ರಿಂದ 2025ರ ಅಕ್ಟೊಬರ್ 3ರವರೆಗಿನ ಅವಧಿಯಲ್ಲಿ ಮಂಜುಳಾ ಮಾದರ್ ಹಾಗೂ ಆಕಾಶ ಗಜಕೋಶ ಸೇರಿ 151000ರೂ ವಸೂಲಿ ಮಾಡಿದ್ದಾರೆ. ಅದಾದ ನಂತರ ಮತ್ತೆ 80 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಆ ವೇಳೆ ಕ್ವಿನಿ ಡಿಸೋಜಾ ಅವರು `ತನಗೆ ಆ ಉದ್ಯೋಗ ಬೇಡ. ಹಣ ಮರಳಿಸಿ’ ಎಂದಿದ್ದಾರೆ. ಆದರೆ, ಅವರು ಹಣವನ್ನು ಮರಳಿಸಿಲ್ಲ. ಉದ್ಯೋಗವನ್ನು ಸಹ ಕೊಟ್ಟಿಲ್ಲ. ಪೆಚ್ಚುಮೋರೆ ಹಾಕಿದ ಕ್ವಿನಿ ಡಿಸೋಜಾ ಅವರು ತಮಗಾದ ಅನ್ಯಾಯವನ್ನು ತಂದೆಯ ಬಳಿ ಹೇಳಿದ್ದು, ಇಶಾಂತ ಡಿಸೋಜಾ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
`ಸರ್ಕಾರಿ ಉದ್ಯೋಗ ಮಾರಾಟಕ್ಕಿಲ್ಲ. ಕಾಸುಕೊಟ್ಟು ಮೋಸ ಹೋಗುವ ಮುನ್ನ ಎಚ್ಚರ’